ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸುವ ಹೊಸ ಐಟಿ ನೀತಿ ಜಾರಿ : ಸಿಎಂ ಘೋಷಣೆ

ಬೆಂಗಳೂರು, ಮಾ.7- ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಹೊಸ ಐಟಿ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಕೌಡ್ ಕಂಪ್ಯೂಟಿಂಗ್ ಮತ್ತು ನೂತನ ತಂತ್ರಜ್ಞಾನಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಿಗೂ ಮಾಹಿತಿ ತಂತ್ರಜ್ಞಾನ
ಕ್ಷೇತ್ರ ವಿಸ್ತರಿಸಿ ರಾಜ್ಯವನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಮುಂದಿನ 5 ವರ್ಷಗಳಲ್ಲಿ 50 ಕೋಟಿ ರೂ. ಹೂಡಿಕೆ ಮಾಡಲಾಗುವುದು. ಇದಲ್ಲದೆ ಸೆಂಟ್ ಫಾರ್ ಅಪ್ರೈಡ್ ಎಐ ಫಾರ್ ಟೆಕ್ ಸೆಲ್ಯೂಷನ್ಸ್ (ಕಾಟ್ಸ್) ಸ್ಥಾಪಿಸಲಾಗುವುದು ಎಂದಿದ್ದಾರೆ. ಬೆಂಗಳೂರಿನ ಐಎಎಸ್‌ಸಿ ಸಹಯೋಗದೊಂದಿಗೆ ಕ್ವಾಂಟಮ್ ರಿಸರ್ಚ್ ಫಾರ್ ಹಂತ-2 ಅನ್ನು 48 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೈವಿಕ ತಂತ್ರಜ್ಞಾನ ನೀತಿ ಎಂಎಸ್‌ಎಂಇ ಮತ್ತು ದೊಡ್ಡ ಉದ್ಯಮದಲ್ಲಿ 1,500 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಲಾಗಿದ್ದು, ಇದಕ್ಕಾಗಿ 220 ಕೋಟೆ ರೂ. ಪ್ರೋತ್ಸಾಹ ನೀಡಲಾಗುವುದು. ಬೆಂಕಿ ಅನಾಹುತಗಳನ್ನು ತಪ್ಪಿಸಲು ಬೆಂಗಳೂರಿನಲ್ಲಿ ಬಯೋ ಇನ್ನೋವೇಷನ್ ಸೆಂಟರ್‌ನ ಪುನರ್ ನಿರ್ಮಾಣಕ್ಕೆ 57 ಕೋಟಿ ರೂ. ನೆರವು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 20 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯವನ್ನು ಮತ್ತಷ್ಟು ಬಲಪಡಿಸಲು ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಷನ್ ಡಿಸ್ಟ್ರಿಕ್ಟ್ ಅನ್ನು ಮೈಸೂರು, ಬೆಳಗಾವಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.