ಮಸ್ಕಿ ಕ್ಷೇತ್ರದಲ್ಲಿ ಶಾಸಕ ಬಸನಗೌಡ ತುರ್ವಿಹಾಳ ಅವರಿಂದ ₹800 ಕೋಟಿ ವೆಚ್ಚದ ಕಾಮಗಾರಿ

ಮಸ್ಕಿ : ಕ್ಷೇತ್ರಕ್ಕೆ ಭಾರೀ ಬಹುಮತದಿಂದ ಆಯ್ಕೆಯಾಗಿರುವ ಆರ್.ಬಸನಗೌಡ ತುರ್ವಿಹಾಳ ಅವರು ₹800 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡುವ ಮೂಲಕ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ನ್ಯಾಯ ಒದಗಿಸಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಶ್ಲಾಘಿಸಿದರು.
ತುರ್ವಿಹಾಳ ಪಟ್ಟಣದ ಅಮೋಘ ಸಿದ್ದೇಶ್ವರ ಮಠದಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ, ಕನಕದಾಸ ಪ್ರತಿಮೆ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಬೇಕಾಗಿತ್ತು. ಅವರಿಗೆ ಕಾಲುನೋವು ಇರುವ ಕಾರಣದಿಂದ ಬರಲು ಸಾಧ್ಯವಾಗಲಿಲ್ಲ. ಅವರ ಪರವಾಗಿ ಶಿವರಾಜ ತಂಗಡಗಿ, ಎನ್.ಎಸ್.ಬೋಸರಾಜು ಮತ್ತು ಇನ್ನುಳಿದ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅವರ ಅನುಯಾಯಿಗಳಾಗಿ ತಾವು ರಾಜ್ಯದ ಜನತೆಯ ಸೇವೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಜನಸಾಮಾನ್ಯರಿಗೆ ದೇಶದಲ್ಲಿಯೇ ವಿಶಿಷ್ಟವಾದ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಪ್ರತಿವರ್ಷ ಸುಮಾರು ₹60 ಸಾವಿರ ಕೋಟಿ ನೇರವಾಗಿ ಜನರ ವೈಯಕ್ತಿಕ ಖಾತೆಗಳಿಗೆ ಪಾವತಿಯಾಗುತ್ತಿದೆ. ರಾಜ್ಯದ ಜನತೆಯ ಆಶೀರ್ವಾದ ಇರುವತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ’ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ‘ಮಠ ಮಾನ್ಯಗಳು ಜನರ ಕಲ್ಯಾಣಕ್ಕಾಗಿ ಸಾಮೂಹಿಕ ವಿವಾಹ, ಆಧ್ಯಾತ್ಮಿಕ ಚಿಂತನೆ ಸೇರಿದಂತೆ ಹಲವು ವಿಧದ ಜನೋಪಯೋಗಿ ಕಾರ್ಯಗಳನ್ನು ಮಾಡುವುದರಿಂದಲೇ ಇಂದಿಗೂ ಮಳೆ, ಬೆಳೆಯಾಗುತ್ತಿವೆ’ ಎಂದು ಅಭಿಪ್ರಾಯಪಟ್ಟರು.
ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ‘ತುರ್ವಿಹಾಳ ಪಟ್ಟಣದ ಮೂರು ಮಠಗಳು ಜನರ ಕಲ್ಯಾಣ ಬಯಸಿ ಸೇವಾ ಕಾರ್ಯದಲ್ಲಿ ತೊಡಗಿವೆ. ಅವರೆಲ್ಲರೂ ತಾವು ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕರ್ನಾಟಕದ ಎಲ್ಲ ವರ್ಗಗಳ ಕಣ್ಮಣಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾಳಜಿಯಿಂದಲೇ ರಾಜ್ಯದಲ್ಲಿ ಹಲವಾರು ಪ್ರಗತಿಪರ ಯೋಜನೆಗಳು ಜಾರಿಗೆ ಬಂದಿವೆ’ ಎಂದರು.
ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್ ಸಾನ್ನಿಧ್ಯ ವಹಿಸಿದ್ದರು. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ, ಶರಣಗೌಡ ಬಯ್ಯಾಪುರ, ಶಾಸಕರಾದ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ, ಅಮರೇಗೌಡ ಬಯ್ಯಾಪುರ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಬಿ.ವಿ.ನಾಯಕ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಲಿಂಗಸುಗೂರು ಎಸಿ ಬಸವರಾಜ ಕಲ್ಶೆಟ್ಟಿ, ತಹಶೀಲ್ದಾರ್ ಅರುಣ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ರೇವಣ ಸಿದ್ದೇಶ್ವರ ಮಠದ ಶಾಂತಮಲ್ಲ ಸ್ವಾಮಿಜಿ, ಚಿದಾನಂದಯ್ಯ ಗುರುವಿನ್, ಗಬ್ಬೂರು ಬೂದಿ ಬಸವೇಶ್ವರ ಸ್ವಾಮೀಜಿ, ಪ್ರವಚನಕಾರ ಸಿದ್ದಲಿಂಗ ಸ್ವಾಮಿಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ಎಂ.ದೊಡ್ಡಬಸವರಾಜ, ನಿರುಪಾದೆಪ್ಪ ವಕೀಲ, ವೀರೇಶ ಗೊನ್ವಾರ, ಸೋಮಲಿಂಗಪ್ಪ ನಿರೂಪಿಸಿದರು.
ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ; ಉದ್ಘಾಟನೆ
ತುರ್ವಿಹಾಳ ಮತ್ತು ಮಸ್ಕಿ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ತುರ್ವಿಹಾಳದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪದವಿ ಕಾಲೇಜು ಕೊಠಡಿಗಳ ಉದ್ಘಾಟನೆ ಮಾಡಲಾಯಿತು. ತುರ್ವಿಹಾಳದಲ್ಲಿ ಬಸ್ ನಿಲ್ದಾಣ ಕಾಮಗಾರಿ ಪ್ರವಾಸಿ ಮಂದಿರ ಕಾಮಗಾರಿ ಸಮುದಾಯ ಭವನ ನಿರ್ಮಾಣ ಗುಂಜಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಮಸ್ಕಿ ತಾಲ್ಲೂಕು ಪ್ರಜಾಸೌಧ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಸ್ಕಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಿಂದ ರಸ್ತೆ ಹಾಗೂ ಸೇತುವೆ ಕಾಮಗಾರಿ ಮಸ್ಕಿಯಲ್ಲಿ ಅಗ್ನಿಶಾಮಕ ದಳ ಠಾಣೆ ನಿರ್ಮಾಣ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಬಳಗಾನೂರು ಪೊಲೀಸ್ ಠಾಣೆ ಕಟ್ಟಡ ಕಾಮಗಾರಿ ಉಮಲೂಟಿ ಮಹಾಂಪುರ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ವರದಿ: ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ