ಮಸ್ಕಿ: ‘ಪ್ರಜಾಸೌಧ’ ಸೇರಿ ₹800 ಕೋಟಿ ವೆಚ್ಚದ 19 ಕಾಮಗಾರಿಗಳಿಗೆ ಚಾಲನೆ

ಮಸ್ಕಿ : ಪಟ್ಟಣದ ಪ್ರಜಾಸೌಧ (ಮಿನಿ ವಿಧಾನಸೌಧ) ಸೇರಿ ಕ್ಷೇತ್ರದ ₹800 ಕೋಟಿ ವೆಚ್ಚದ 19ಕ್ಕೂ ಹೆಚ್ಚು ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೆಂಗಳೂರಿನಿಂದ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಹಶೀಲ್ದಾರ್ ಮಲ್ಲಪ್ಪ ಯರಗೋಳ ತಿಳಿಸಿದ್ದಾರೆ.
ತುರ್ವಿಹಾಳ ಪಟ್ಟಣದಲ್ಲಿ ಫೆ. 23 (ಭಾನುವಾರ) ರಂದು ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಅಮೃತ ಯೋಜನೆ ಕಾಮಗಾರಿ, ಮಸ್ಕಿ, ತುರ್ವಿಹಾಳದಲ್ಲಿ ಇಂದಿರಾ ಕ್ಯಾಂಟಿನ್, ಸಮುದಾಯ ಆರೋಗ್ಯ ಕೇಂದ್ರ, ಕನಕಭವನ ಸೇರಿದಂತೆ 19 ಕ್ಕೂ ಹೆಚ್ಚು ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಅಧ್ಯಕ್ಷತೆ ವಹಿಸಲಿದ್ದು ಸಚಿವರಾದ ಸತೀಶ ಜಾರಕಿಹೊಳೆ, ಬೈರತಿ ಸುರೇಶ, ಡಾ.ಶರಣಪ್ರಕಾಶ ಪಾಟೀಲ, ಎನ್.ಎಸ್.ಬೋಸರಾಜ, ಶಿವರಾಜ ತಂಡಗಿ, ಕೃಷ್ಣ ಬೈರೇಗೌಡ ಸೇರಿದಂತೆ ಅನೇಕ ಸಚಿವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಅನೇನ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
₹25 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣ
ಮಸ್ಕಿ: ತಾಲ್ಲೂಕು ಆಡಳಿತ ಕಚೇರಿಯಾದ ಪ್ರಜಾಸೌಧ ಕಟ್ಟಡವನ್ನು ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹೌಸಿಂಗ್ ಬೋರ್ಡ್‌ಗೆ ನಿರ್ಮಾಣದ ಹೊಣೆ ವಹಿಸಲಾಗಿದ್ದು ಮೊದಲ ಹಂತರದಲ್ಲಿ ₹8.6 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜ್ಯ ಸರ್ಕಾರ ₹10 ಕೋಟಿ ಹಾಗೂ ಕೆಕೆಆರ್‌ಡಿಬಿಯಿಂದ ₹15 ಕೋಟಿ ಅನುದಾನವನ್ನು ಈ ಕಟ್ಟಡಕ್ಕೆ ಒದಗಿಸಲಾಗಿದೆ. ಪಟ್ಟಣದ ವೆಂಕಟಾಪೂರ ರಸ್ತೆಯಲ್ಲಿ 5 ಎಕರೆ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣವಾಗಲಿದೆ.
ವರದಿ: ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ