ವಿದ್ಯಾರ್ಥಿಗಳಿಗೆ ಪಾಲಕರ ಕಷ್ಟದ ಅರಿವಿರಲಿ: ಸುಭಾಷ್ ಕೊರೆಕರ್ ಕಿವಿಮಾತು.

ಮಸ್ಕಿ:ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿ ಹೊಂದಿ ಅದರ ಸಾಧನೆಗೆ ನಿರಂತರವಾಗಿ ಪರಿಶ್ರಮ ವಹಿಸಿದರೆ ಉನ್ನತ ಸ್ಥಾನ ಪಡೆಯಬಹುದು ಎಂದು ಸಂಸ್ಥೆಯ ಅಧ್ಯಕ್ಷ ಸುಭಾಷ್ ಕೊರೆಕರ್ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 14 ನೇ ವರ್ಷದ ಕಾಲೇಜು ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಕರು ಹಲವಾರು ಕಷ್ಟದ ನಡುವೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿ
ಕೊಳ್ಳುತ್ತಾರೆ.
ಆದರೆ ವಿದ್ಯಾರ್ಥಿಗಳು ಮೊಬೈಲ್ ಚಾಳಿಗೆ ಬಿದ್ದು ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದಿಂದ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಕಳೆಹೀನರಾಗುತ್ತಿದ್ದು ಅವರ ಭವಿಷ್ಯವನ್ನು ಚಿಕ್ಕ ವಯಸ್ಸಿನಲ್ಲಿ ಹಾಳು ಮಾಡಿಕೊಂಡು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.ಈ ಮೂಲಕ ತಮ್ಮ ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೆವೆ ಆದ್ದರಿಂದ ಪಾಲಕರು ಹಾಗೂ ಗುರುಗಳ ಮಾರ್ಗದರ್ಶನ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಅದೇ ರೀತಿ ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಕರ್ಲಿ ರವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರ ಜೊತೆಗೆ ಉತ್ತಮವಾದ ನಡುವಳಿಕೆ ಹಾಗೂ ಅಭ್ಯಾಸಗಳನ್ನು ಬಳಸಿಕೊಂಡು ಸುಸಂಸ್ಕೃತ ರಾಗಿ ರೂಪುಗೊಳ್ಳಬೇಕು. ಪ್ರತಿ ವಿದ್ಯಾರ್ಥಿಗೂ ಪದವಿ ಪೂರ್ವ ಹಂತ ಬಹುಮುಖ್ಯವಾಗಿದ್ದು ಈ ಮೂಲಕ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದು
ಕೊಳ್ಳುವುದರ ಮೂಲಕ ಪಾಲಕರು,ಗುರುಗಳು ಹಾಗೂ ಕಾಲೇಜಿಗೆ ಕೀರ್ತಿ ತರಬೇಕೆಂದು ಹೇಳಿದರು. ಉಪನ್ಯಾಸಕರಾದ ಹುಸೇನಬಾಷಾ
ಮಸ್ಕಿ,ಬನಶ್ರೀ,ತಬಸುಮ್ ಹಾಗೂ ವಿದ್ಯಾರ್ಥಿಗಳಾದ ಬಾಗೀರಥಿ,ಅಪ್ಪಯ್ಯ,ಕೃತಿಕ ಬಸವರಾಜ ಹಾಗೂ ವಿಶ್ವನಾಥ ಅನಿಸಿಕೆ ವ್ಯಕ್ತ ಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಪಿ.ರಾಮು ದುರ್ಗಾಕ್ಯಾಂಪ್,ಮತ್ತು ಉಪನ್ಯಾಸಕರಾದ ಎಮ್ ಡಿ ಯುಸುಪ್,ಸೇರಿದಂತೆ ವಿದ್ಯಾರ್ಥಿಗಳು
ಇದ್ದರು.