ಮಾಜಿ ಶಾಸಕ ಪ್ರತಾಪಗೌಡ ಬೆಂಬಲಿಗರಿಂದ ಜಮೀನು ಒತ್ತುವರಿ ಆರೋಪ: ದಯಾಮರಣಕ್ಕೆ ಮನವಿ

ಮಸ್ಕಿ : ಮಾಜಿ ಶಾಸಕರ ಬೆಂಬಲಿಗರು ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ರಾಜಕೀಯ ಪ್ರಭಾವದಿಂದ ಕ್ರಮ ಕೈಗೊಳ್ಳುತ್ತಿಲ್ಲ. ಒತ್ತುವರಿದಾರರಿಂದ ರಕ್ಷಣೆಯನ್ನೂ ನೀಡುತ್ತಿಲ್ಲ. ದಯಾಮರಣವನ್ನಾದರೂ ದಯಪಾಲಿಸಬೇಕು ಎಂದು ಒತ್ತಾಯಿಸಿ ದೌರ್ಜನ್ಯಕ್ಕೊಳಗಾದ ಕುಟುಂಬ ಗುರುವಾರ ಮಧ್ಯರಾತ್ರಿ ಜಿಲ್ಲಾಧಿಕಾರಿ ನಿವಾಸದ ಮುಂದೆ ಧರಣಿ ನಡೆಸಿದರು.
ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಗ್ರಾಮದ ಹನುಮಂತ ಅವರು ಪತ್ನಿ, ಮಕ್ಕಳೊಂದಿಗೆ ಧರಣಿ ನಡೆಸಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರ ಬೆಂಬಲಿಗ ದುರ್ಗಾಪ್ರಸಾದ ದಬ್ಬಾಳಿಕೆ ಮಾಡಿ ನಿವೇಶನ ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಸಹ ನೆರವಿಗೆ ಬರುತ್ತಿಲ್ಲ ಎಂದು ದೂರಿದ್ದಾರೆ.
ಆರೋಪಿಗಳ ದೌರ್ಜನ್ಯ ದಿಂದ ಬೇಸತ್ತಿದ್ದೇವೆ. ಜೀವ ಭಯದಲ್ಲೇ ಕಾಲ ಕಳೆಯುತ್ತಿದ್ದೇವೆ. ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಂದಿಸದಿದ್ದರೆ ನಾವು ಯಾರ ಬಳಿ ನ್ಯಾಯ ಕೇಳಬೇಕು. ಜಿಲ್ಲಾಧಿಕಾರಿ ಅವರು ರಾಜ್ಯಪಾಲರ ಮೂಲಕ ನಮಗೆ ದಯಾಮರಣ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ನಿವಾಸದ ಮುಂದೆ ಮಧ್ಯರಾತ್ರಿ ಧರಣಿ ನಡೆಸುತ್ತಿರುವುದನ್ನು ನೋಡಿ ಅಲ್ಲಿ ಕಾವಲಿಗೆ ನಿಯೋಜಿಸಲಾಗಿದ್ದ ಪೊಲೀಸ್ ಕಾನ್ಸ್ಟೆಬಲ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿಯೊಂದಿಗೆ ಸಮಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವೊಲಿಸಿದರು.
ನಂತರ ರಾತ್ರಿಯೇ ಪೊಲೀಸರು ಧರಣಿನಿರತರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದು ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಗ್ರಾಮಕ್ಕೆ ಬಿಟ್ಟು ಬಂದಿದ್ದಾರೆ.
ವರದಿ: ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ