ಹಾಲಿನ ದರ ಹೆಚ್ಚಳ! ಸಿಎಂ ಜೊತೆ ಶೀಘ್ರದಲ್ಲೇ ಸಭೆ: ರೈತರ ಬೇಡಿಕೆ ಏನು?

ಸಂಕ್ರಾಂತಿ ಹಬ್ಬದ ನಂತರ ನಂದಿನಿ ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಕರ್ನಾಟಕ ಹಾಲು ಒಕ್ಕೂಟ (KMF) ನಿರ್ಧರಿಸಿದೆ. ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಕೆಎಂಎಫ್‌ನ ಅಧ್ಯಕ್ಷ, ಮಾಜಿ ಶಾಸಕ ಭೀಮಾನಾಯಕ್, ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳ ಮಾಡುವಂತೆ ರೈತರಿಂದ ಬೇಡಿಕೆ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರೈತರ ಬೇಡಿಕೆಗಳನ್ನು ಕುರಿತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಹಾಗಾಗಿ, ಸಂಕ್ರಾಂತಿ ಹಬ್ಬದ ಬಳಿಕ ಈ ಸಂಬಂಧ ಸಭೆ ನಡೆಸಿ ದರ ಏರಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಸಂಕ್ರಾಂತಿ ನಂತರ ನಂದಿನಿ ಹಾಲಿನ ದರ ಲೀಟರ್‌ಗೆ 5 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.
2 ರೂ.ಇಳಿಕೆ, 50 ಎಂ.ಎಲ್ ಹೆಚ್ಚುವರಿ ಹಾಲು ಕಡಿತ:
ಜೂನ್‌ನಿಂದ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂ.ಎಲ್ ಹೆಚ್ಚುವರಿ ಹಾಲನ್ನು ಕಡಿತಗೊಳಿಸಿ, ಅದರ ದರವನ್ನೂ 2 ರೂ.ನಷ್ಟು ಇಳಿಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಹಾಲು ಸಂಗ್ರಹಣೆ ಪ್ರಮಾಣವು ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದರಿಂದ ಪ್ಯಾಕೆಟ್‌ನಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚಿಸಲಾಗಿತ್ತು ಮತ್ತು ದರವನ್ನು 2 ರೂ. ಏರಿಕೆ ಮಾಡಲಾಗಿತ್ತು. ಈಗ ಹಾಲಿನ ಜತೆ ದರ ಹೆಚ್ಚಳವನ್ನೂ ಹಿಂಪಡೆಯಲಾಗುತ್ತಿದೆ, ಎಂದು ಭೀಮಾ ನಾಯ್ಕ್ ತಿಳಿಸಿದ್ದಾರೆ.
ದರ ಏರಿಕೆಗೆ ಸ್ಪಷ್ಟನೆ ನೀಡಿದ್ದ ಭೀಮಾ ನಾಯ್ಕ್
ಈ ಹಿಂದೆ ‘ದಕ್ಷಿಣ ಭಾರತದ ಇತರೆ ರಾಜ್ಯಗಳು ಮತ್ತು ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿದ್ದರು.
ನಂದಿನಿ ಉತ್ಪನ್ನಗಳನ್ನು ಜೈಪುರದಲ್ಲಿ ಮಾರಾಟ
ಕೆಎಂಎಫ್ ನಂದಿನಿ ಉತ್ಪನ್ನಗಳನ್ನು ಜೈಪುರದಲ್ಲಿ ಮಾರಾಟ ಮಾಡಲು ಯೋಜಿಸಿದೆ ಎಂದು ನಾಯಕ್ ಹೇಳಿದರು. “ಶಿವಮೊಗ್ಗ ಒಕ್ಕೂಟವು ಇಂದೋರ್ ಮತ್ತು ಭೋಪಾಲ್‌ಗೆ ವಿಸ್ತರಿಸುತ್ತಿದೆ.
ಆರು ತಿಂಗಳ ಹಿಂದಷ್ಟೇ ಹಾಲಿನ ಬೆಲೆ ಏರಿಕೆ
ಆರು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲಿನ ಪ್ರಮಾಣ ಮತ್ತು ದರ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ.
ಡಿಸೆಂಬರ್ 25 ರಂದು ಬಿಡುಗಡೆ ಮಾಡಲಾದ ಹಾಲೊಡಕು ಪ್ರೋಟೀನ್ ಮಿಶ್ರಿತ ಇಡ್ಲಿ / ದೋಸೆ ಹಿಟ್ಟು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬೆಂಗಳೂರಿನ ಎಲ್ಲಾ ನಂದಿನಿ ಪಾರ್ಲ‌್ರಗಳಲ್ಲಿ ಲಭ್ಯವಿರುತ್ತದೆ ಎಂದು ನಾಯಕ್ ಹೇಳಿದರು.
ಕೆಎಂಎಫ್‌ನ ಬಜೆಟ್‌ಗೆ ಆರ್‌ಸಿಬಿಯವರು ಒಪ್ಪಿಕೊಂಡರೆ ಮುಂದಿನ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಮಾಡಲಾಗುವುದು. ಈ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲಾಗುವುದು ಎಂದರು.