ಪೋಡಿಯಂ, ಮೈಕ್ ಕಿತ್ತು ಬಿಸಾಡಿ ಜಗಳಕ್ಕಿಳಿದ ದೆಹಲಿ ನೂತನ ಸಿಎಂ ರೇಖಾ ಗುಪ್ತಾ; ವಿಡಿಯೊ ವೈರಲ್

ನವದೆಹಲಿ: ನಿನ್ನೆಯಷ್ಟೇ (ಫೆಬ್ರವರಿ 19) ರಾಷ್ಟ್ರ ರಾಜಧಾನಿ ದೆಹಲಿಗೆ ಬಿಜೆಪಿ ನೂತನ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿದೆ. ರೇಖಾ ಗುಪ್ತಾ ಎಂಬ ಮಹಿಳಾ ಸಿಎಂ ಅನ್ನು ಘೋಷಿಸಿರುವ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ದೆಹಲಿಯನ್ನು ಆಡಳಿತ ನಡೆಸಲು ತಯಾರಾಗಿದೆ.
ಇನ್ನು ರೇಖಾ ಗುಪ್ತಾ ನೂತನ ಸಿಎಂ ಎಂದು ಆಯ್ಕೆಯಾದ ಬೆನ್ನಲ್ಲೇ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ದುಡಿದ ಕಾರ್ಯಕರ್ತೆ ಎಂಬ ಹೆಸರನ್ನು ಹೊಂದಿರುವ ರೇಖಾ ಗುಪ್ತಾ ಸದ್ಯ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಪಟ್ಟಿಯಲ್ಲಿದ್ದಾರೆ.
ಹೀಗೆ ಸದ್ದು ಮಾಡುತ್ತಿರುವ ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಅವರ ಹಳೆಯ ವಿಡಿಯೊವೊಂದು ಇದೇ ಸಮಯಕ್ಕೆ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ರೇಖಾ ಗುಪ್ತಾ ಈ ಹಿಂದೆ ನಡೆದಿದ್ದ ಮೇಯರ್ ಚುನಾವಣೆಯಲ್ಲಿ ಸೋತ ಬಳಿಕ ಅಲ್ಲಿದ್ದ ಪೋಡಿಯಂ ಹಾಗೂ ಮೈಕ್ ಅನ್ನು ಕೋಪದಲ್ಲಿ ಕಿತ್ತು ಬಿಸಾಡಿದ್ದರು. ಈ ವಿಡಿಯೊ ಈಗ ವೈರಲ್ ಆಗುತ್ತಿದ್ದು, ರೇಖಾ ಗುಪ್ತ ವಿರುದ್ಧ ಟೀಕೆಗಳೂ ಸಹ ಆರಂಭವಾಗಿವೆ.