ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗಲಾರದ ನೋವು: ಮನೆಯ ಹಿತ್ತಲಲ್ಲೇ 40 ಅಡಿ ಬಾವಿ ತೋಡಿದ ಶಿರಸಿ ಮಹಿಳೆ!

ಶಿರಸಿ(ಉತ್ತರ ಕನ್ನಡ): ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರಿತ ಶಿರಸಿಯ ಮಹಿಳೆಯೊಬ್ಬರು ಮನೆ ಹಿತ್ತಲಲ್ಲೇ ಒಬ್ಬಂಟಿಯಾಗಿ 40 ಅಡಿ ಬಾವಿ ತೋಡಿ ‘ಗಂಗಾ’ ಜಲ ಸೃಷ್ಟಿಸಿಕೊಂಡಿದ್ದಾರೆ.
ಶಿರಸಿ ಗಣೇಶನಗರ ಸನಿಹದ ನಿವಾಸಿ 57 ವರ್ಷದ ಗೌರಿ ನಾಯ್ಕ್ ಎಂಬುವರೇ ಈ ಅಪರೂಪದ ಸಾಧನೆ ಮಾಡಿದ್ದು, ಶಿವರಾತ್ರಿಯಂದು (ಫೆ.26) ಇದೇ ಬಾವಿಯ ನೀರಲ್ಲಿ ಪುಣ್ಯಸ್ನಾನ ಮಾಡಲು ಸಿದ್ಧರಾಗಿದ್ದಾರೆ.ಮಹಾಕುಂಭಕ್ಕೆ ಹೋಗಲು ಅದೃಷ್ಟವಂತರಾಗಿರಬೇಕು. ಸಣ್ಣ ಕೃಷಿ ಭೂಮಿ ಇರುವ, ಆದಾಯ ಕಡಿಮೆ ಇರುವ ನನಗೆ ಅದು ಸಾಧ್ಯವಾಗದು. ಅದಕ್ಕಾಗಿ ನಾನು ಇಲ್ಲಿಯೇ ಬಾವಿ ಅಗೆದು ಗಂಗೆಯನ್ನು ತರಲು ನಿರ್ಧರಿಸಿದೆ ಎಂದು ಗೌರಿ ಹೇಳಿದ್ದಾರೆ.ಗೌರಿ ಸುಮಾರು 40 ಅಡಿವರೆಗೆ ಬಾವಿ ತೋಡಿದ್ದರು. ಬಾವಿಯಲ್ಲಿ ಸಾಕಷ್ಟು ನೀರು ದೊರೆತಿರುವುದಕ್ಕೆ ಸಂತಸಗೊಂಡಿದ್ದಾರೆ.ಮಹಾ ಶಿವರಾತ್ರಿಯಂದು ನಾನು ಬಾವಿಯ ನೀರಿನಿಂದ ಪುಣ್ಯ ಸ್ನಾನ ಮಾಡಲು ಯೋಜಿಸುತ್ತಿದ್ದೇನೆ ಎಂದು ಗೌರಿ ತಿಳಿಸಿದ್ದಾರೆ.ಮಹಾಕುಂಭಮೇಳದ ಬಗ್ಗೆ ಡಿಸೆಂಬರ್‌ನಲ್ಲಿ ಗೌರಿ ಅವರಿಗೆ ಮಾಹಿತಿ ಗೊತ್ತಾಗಿತ್ತು. ಆದರೆ ಪ್ರಯಾಗ್‌ರಾಜ್‌ಗೆ ಹೋಗಲು ಹಣವಿಲ್ಲ ಎಂಬ ಅರಿವೂ ಅವರಿಗಿತ್ತು. ಆಗಲೇ ಅವರು ಬಾವಿ ತೋಡಲು ನಿರ್ಧರಿಸಿದರು. ಡಿಸೆಂಬರ್ 15 ರಿಂದಲೇ ಕೆಲಸ ಪ್ರಾರಂಭಿಸಿದ್ದರು.ಗೌರಿಯ ಸಂಬಂಧಿಕರು ಮತ್ತು ನೆರೆಹೊರೆಯವರು ಹೇಳಿದ ಪ್ರಕಾರ, ಗೌರಿ ದಿನಕ್ಕೆ ಸುಮಾರು 6-8 ಗಂಟೆ ಕಾಲ ಮಣ್ಣನ್ನು ಅಗೆಯುವ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದ ಎರಡು ತಿಂಗಳ ನಂತರ ಫೆಬ್ರವರಿ 15 ರಂದು ಬಾವಿಯನ್ನು ಪೂರ್ಣಗೊಳಿಸಿದ್ದಾರೆ. ಬಾವಿಯಲ್ಲಿ ನೀರಿನ ಒರತೆಯೂ ಚಿಮ್ಮಿದೆ.ಗೌರಿಯ ಇಂತಹ ಸಾಧನೆ ಇದೇ ಮೊದಲಲ್ಲ. ಯಾರ ಸಹಾಯವಿಲ್ಲದೆ ಬಾವಿ ತೋಡುವುದು ಗೌರಿಗೆ ಹೊಸದೇನಲ್ಲ. ಅವರು ಈ ಹಿಂದೆಯೂ ನಾಲ್ಕು ಬಾವಿಗಳನ್ನು ತೋಡಿದ್ದಾರೆ. ಒಂದು ಬಾವಿಯನ್ನು ಕೃಷಿಗಾಗಿ ತನ್ನ ಹೊಲದಲ್ಲಿ, ಇನ್ನೊಂದು ತನ್ನ ಹಳ್ಳಿಯ ಜನರ ಬಾಯಾರಿಕೆ ನೀಗಿಸಲು ಮತ್ತು ಮೂರನೆಯ ಬಾವಿಯನ್ನು 2024 ರ ಮಧ್ಯ ಭಾಗದಲ್ಲಿ ಶಿರಸಿಯ ಗಣೇಶ ನಗರ ಅಂಗನವಾಡಿ ಶಾಲೆಗಾಗಿ ನಿರ್ಮಿಸಿದ್ದರು.
ಅಂಗನವಾಡಿಯ ಬಾವಿಯ ಕೆಲಸದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಜಿಲ್ಲಾಡಳಿತವು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಾವಿ ತೋಡುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮೊದಲಿಗೆ ಗೌರಿ ಅವರನ್ನು ಸನ್ಮಾನಿಸಿದರಾದರೂ, ನಂತರ ಬಾವಿ ತೋಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದರು. ಆದರೆ ಆಗಿನ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗ್ಡೆ ಅವರ ಬೆಂಬಲದ ನಂತರ ಗೌರಿ ಬಾವಿಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದರು. ಗೌರಿ ಅವರು ಅಂದು ತೋಡಿದ್ದ 45 ಅಡಿ ಆಳದ ಬಾವಿಯಲ್ಲಿ ಈಗಲೂ ನೀರಿದ್ದು, ಬಳಕೆಯಲ್ಲಿದೆ.
ವರದಿ : C ಕೊಟ್ರೇಶ್ tv8kannada