ʼಮ್ಯಾಕ್ಸ್ʼ 24 ಗಂಟೆಯಲ್ಲಿ ಮಾಡಿದ್ದ ದಾಖಲೆಯನ್ನು ಕೇವಲ ಐದೇ ಗಂಟೆಯಲ್ಲಿ ಹೊಡೆದುರುಳಿಸಿದ ʼಡೆವಿಲ್ʼ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ವಾಸಿಯಾಗಿ ಆಚೆ ಬಂದ ಬಳಿಕ ಬಿಡುಗಡೆಯಾಗಲಿರುವ ʼದ ಡೆವಿಲ್ʼ ಚಿತ್ರದ ಟೀಸರ್ ಇಂದು (ಫೆಬ್ರವರಿ 16) ಬಿಡುಗಡೆಯಾಗಿದೆ.
ದರ್ಶನ್ ಪಬ್ ಒಂದರಲ್ಲಿ ನಶೆಯಲ್ಲಿ ವಿಲನ್‌ಗಳನ್ನು ಬಾರಿಸುವ ಸಾಲು ಸಾಲು ದೃಶ್ಯಗಳನ್ನೊಳಗೊಂಡ 1.04 ನಿಮಿಷದ ಟೀಸರ್ ಇದಾಗಿದೆ.
ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇನ್ನು ಟೀಸರ್ ತನ್ನ ಕ್ವಾಲಿಟಿಯಿಂದ ಸಿನಿ ರಸಿಕರ ಮನ ಗೆದ್ದಿದ್ದು, ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಎನಿಸುತ್ತದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೀಗೆ ಸಿನಿ ಜಗತ್ತಿನಲ್ಲಿ ಟಾಕ್ ಹುಟ್ಟುಹಾಕಿರುವ ಡೆವಿಲ್ ಟೀಸರ್ ದಾಖಲೆಯನ್ನೂ ಸಹ ಬರೆಯುತ್ತಿದೆ. ಈ ಹಿಂದೆ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ 24 ಗಂಟೆಗಳಲ್ಲಿ ಮಾಡಿದ್ದ ದಾಖಲೆಯನ್ನು ಡೆವಿಲ್ ಕೇವಲ ಐದು ಗಂಟೆಯಲ್ಲಿ ಮುರಿದುಹಾಕಿದೆ.
ಹೌದು, ಕಳೆದ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಮ್ಯಾಕ್ಸ್ ಟೀಸರ್ 24 ಗಂಟೆಗಳಲ್ಲಿ 1,70,000 ಲೈಕ್ಸ್‌ಗಳನ್ನು ಯುಟ್ಯೂಬ್‌ನಲ್ಲಿ ಪಡೆದುಕೊಂಡು 24 ಗಂಟೆಯಲ್ಲಿ ಅತಿಹೆಚ್ಚು ಮೆಚ್ಚುಗೆಗಳನ್ನು ಪಡೆದುಕೊಂಡ ಟೀಸರ್ ಎಂಬ ದಾಖಲೆ ಬರೆದಿತ್ತು.
ಆದರೆ ದ ಡೆವಿಲ್ ಕೇವಲ 5 ಗಂಟೆಯಲ್ಲಿ 1,70,000 ಮೆಚ್ಚುಗೆಯನ್ನು ದಾಟುವ ಮೂಲಕ ಈ ದಾಖಲೆಯನ್ನು ಮುರಿದುಹಾಕಿದೆ. ಇನ್ನು ಡೆವಿಲ್ 24 ಗಂಟೆಗಳಲ್ಲಿ ಎಷ್ಟು ಮೆಚ್ಚುಗೆಗಳನ್ನು ಮುಟ್ಟಲಿದೆ ಎಂಬುದನ್ನು ನೋಡಬೇಕಿದೆ.