ಪಾಂಡವಪುರ : ಪಿಡಿಓ ಅಮಾನತಿಗೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ರೈತ ಸಂಘದ ಧರಣಿ
ಪಾಂಡವಪುರ : ದೊಡ್ಡಬ್ಯಾಡರಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ವಿಚಾರವಾಗಿ ಐವರ ಮೇಲೆ ಪಿಡಿಓ ಬಸವರಾಜು ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ತಾಲೂಕು ಪಂಚಾಯಿತಿ ಎದುರು ಎರಡನೇ ದಿನವೂ ಮುಂದುವರೆದ ರೈತಸಂಘದ ಕಾರ್ಯಕರ್ತರ ಧರಣಿ.
ರೈತ ಸಂಘದ ವತಿಯಿಂದ ದೊಡ್ಡಬ್ಯಾಡರಹಳ್ಳಿ ಪಿಡಿಒ ಬಸವರಾಜ್ ರವರ ಮೇಲೆ ದೂರು ನೀಡಿದ್ದು ದೂರಿನ ತನಿಖೆ ಮುಗಿಯುವವರೆಗೂ ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಪಂಚಾಯ್ತಿಯ ಗೇಟಿನ ಹೊರಗಡೆ ರೈತ ಸಂಘ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಕಾರ್ಯದರ್ಶಿ ವಿಜಯ್ ಕುಮಾರ್ ರವರ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಈ ವೇಳೆ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್ ಮಾತನಾಡಿ, ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ ರವರ ಮೇಲೆ ದೂರು ದಾಖಲಾಗಿದ್ದು ತಕ್ಷಣದಿಂದಲೇ ಅವರನ್ನು ಅಮಾನತಿನ ಅಮಾನತ್ತಿನಲ್ಲಿಟ್ಟು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ . ಹಾಗೂ ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ನಾವು ಮಾಡಿಲ್ಲ. ಪಿಡಿಒ ಬಸವರಾಜುರವರಿಗೆ ಇದೇನು ಹೊಸದಲ್ಲ. ಅವರ ಮೇಲೆ ಈಗಾಗಲೇ ಹಲವು ಆರೋಪಗಳಿವೆ. ನಾವು ಸುಖಾಸುಮ್ಮನೆ ಅವರ ಮೇಲೆ ಆರೋಪ ಮಾಡುತ್ತಿಲ್ಲ ಎಂದರು.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ರವರು ಒಂದು ಪಕ್ಷದ ಏಜೆಂಟ್ ನಂತೆ ಕೆಲಸ ಮಾಡುತ್ತಿದ್ದಾರೆ. ಅವರೇ ಹೇಳಿಕೊಳ್ಳುತ್ತಾರೆ ಶಾಸಕರಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದು, ಅವರೇ ನನ್ನ ಗಾಡ್ ಫಾದರ್ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಅಷ್ಟು ವಿಶ್ವಾಸ ಇದ್ದರೆ ಅವರ ಮನೆಯಲ್ಲಿ ಹೋಗಿ ಅವರ ವೈಯಕ್ತಿಕ ಕೆಲಸ ಮಾಡಲಿ. ಅದನ್ನು ಬಿಟ್ಟು ಇದನ್ನು ತಾಲೂಕು ಪಂಚಾಯಿತಿ ವರೆಗೆ ತಂದರೆ ರೈತಸಂಘ ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್, ಕೆ.ಕೆ.ಗೌಡೇಗೌಡ ಇತರರಿದ್ದರು.