“ಒಂದೇ ಹಂತದಲ್ಲಿ ಕಂದಾಯ ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಚಿಂತನೆ”
ಬೆಂಗಳೂರು,ಸೆ.24- ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆ, ಪುರಸಭೆ ವ್ಯಾಪ್ತಿಗಳಲ್ಲಿ ಕಂದಾಯ ನಿವೇಶನಗಳನ್ನು ಒಂದೇ ಹಂತದಲ್ಲಿ ಸಕ್ರಮಗೊಳಿಸುವ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ರಾಘವೇಂದ್ರ ಇತ್ನಾಳ್ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅವರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕಂದಾಯ ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸಿಎಂ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಸಚಿವ ಎಂಟಿಬಿ ನಾಗರಾಜ್ ಉತ್ತರಿಸಿ ನಗರಪ್ರದೇಶಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರು, ಸ್ವಚ್ಛತೆ ಮತ್ತು ಬೀದಿ ದೀಪಗಳನ್ನು ಅಳವಿಡಿಸಿ ಈಗಾಗಲೇ ಕಲ್ಪಿಸಿರುವ ಸೌಲಭ್ಯಗಳನ್ನು ತಡೆ ಹಿಡಿಯುವ ಪ್ರಶ್ನೆಯೇ ಇಲ್ಲ ಎಂದರು.
ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ್ದರೂ ಫಾರಂ ಸಂಖ್ಯೆ 3ನ್ನು ನೀಡುತ್ತಿಲ್ಲ. ಈ ಸಂಬಂಧ ಈಗಾಗಲೇ ನಿರ್ಮಾಣ ಮಾಡಿಕೊಂಡಿರುವ ಬಡಾವಣೆಗಳಿಗೆ ಯೋಜನಾ ಪ್ರಾಧಿಕಾರ ಅನುಮತಿ ನೀಡದಂತೆ ಸೂಚನೆ ಕೊಡಲಾಗಿದೆ ಎಂದರು.
ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಲು ಸರ್ಕಾರ ಜಾರಿಗೆ ತಂದಿರುವ ನಿಯಮಕ್ಕೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಳೆದ ಮೂರು ವರ್ಷಗಳಿಂದ ಇದನ್ನು ತೆರವುಗೊಳಿಸಿಲ್ಲ ಎಂದು ಹೇಳಿದರು. ಈ ಹಂತದಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಕುಮಾರಬಂಗಾರಪ್ಪ, ಶಿವಾನಂದಪಾಟೀಲ್ ಮತ್ತಿತರರು, ಸರ್ಕಾರ ಮೂರು ವರ್ಷವಾದರೂ ಯಾಕೆ ತೆರವುಗೊಳಿಸಿಲ್ಲ ಎಂದು ಪ್ರಶ್ನಿಸಿದರು.
ಕಂದಾಯ ನಿವೇಶನಗಳಲ್ಲಿ ಬೇಕಾಬಿಟ್ಟಿಯಾಗಿ ನಿವೇಶನಗಳನ್ನು ನಿರ್ಮಿಸುತ್ತಾರೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಅನೇಕರಿಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರದ ಗಮನಕ್ಕೆ ತಂದರು.