Satish Jarkiholi’s Son: ಸತೀಶ್ ಜಾರಕಿಹೊಳಿ ಪುತ್ರ ಪಾಲಿಟಿಕ್ಸ್‌ಗೆ ಎಂಟ್ರಿ! ಪ್ರಿಯಾಂಕಾ ಬೆನ್ನಲ್ಲೇ, ರಾಹುಲ್ ಜಾರಕಿಹೊಳಿ ಗೆಲುವು

ಬೆಳಗಾವಿ : ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಇದೀಗ ಪುತ್ರನನ್ನು ರಾಜಕೀಯಕ್ಕೆ ಕರೆತಂದಿದಿದ್ದಾರೆ. ಈಗಾಗಲೇ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯನ್ನು (Priyanka Jarkiholi) ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಚಿಕ್ಕೋಡಿ (Chikkodi) ಕ್ಷೇತ್ರದಿಂದ ನಿಲ್ಲಿಸಿ, ಗೆಲ್ಲಿಸಿದ್ದರು.
ಇದೀಗ ತಮ್ಮ ಪುತ್ರ ರಾಹುಲ್ ಜಾರಕಿಹೊಳಿಯನ್ನು ಪಾಲಿಟಿಕ್ಸ್‌ಗೆ ಕರೆತಂದಿದ್ದಾರೆ. ಸದ್ಯ ರಾಹುಲ್ ಜಾರಕಿಹೊಳಿ (Rahul Jarkiholi) ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಹುಲ್ ಜಾರಕಿಹೊಳಿ ಗೆದ್ದು ಬೀಗಿದ್ದಾರೆ!
ರಾಜಕಾರಣಕ್ಕೆ ಸತೀಶ್ ಜಾರಕಿಹೊಳಿ ಪುತ್ರ ಎಂಟ್ರಿ
ರಾಜ್ಯ ರಾಜಕಾರಣಕ್ಕೆ ಸತೀಶ್ ಜಾರಕಿಹೊಳಿ ಪುತ್ರನ ಎಂಟ್ರಿಯಾಗಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ 1.80 ಲಕ್ಷ ಮತ ಪಡೆದು ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾಲಕಿಹೊಳಿ ಗೆಲುವು ದಾಖಲಿಸಿದ್ದಾರೆ.
ಆನ್‌ಲೈನ್ ವೋಟಿಂಗ್ ಮೂಲಕ ನಡೆದ ಚುನಾವಣೆ
ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಹುಲ್ ಜಾರಕಿಹೊಳಿ ಸ್ಪರ್ಧಿಸಿದ್ದರು. ಆನ್‌ಲೈನ್ ಮತಗಳ ಚಲಾವಣೆ ಮೂಲಕ ನಡೆದ ಚುನಾವಣೆಯಲ್ಲಿ ರಾಹುಲ್‌ಗೆ ಭರ್ಜರಿ ಗೆಲುವು ಸಿಕ್ಕಿದೆ.
ಗೋಕಾಕ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಇನ್ನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಹುಲ್ ಜಾರಕಿಹೊಳಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಸತೀಶ್ ಜಾರಕಿಹೊಳಿ ಬೆಂಬಲಿಗರು, ರಾಹುಲ್ ಜಾರಕಿಹೊಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಲೋಕಸಭೆ ಚುನಾವಣೆ ಮೂಲಕ ಪುತ್ರಿ ಎಂಟ್ರಿ
ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಈಗಾಗಲೇ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಗೌಡ ಆಯ್ಕೆ
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್‌ಗೌಡ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 2.7 ಲಕ್ಷ ಮತಗಳ ಅಂತರದಿಂದ ಮಂಜುನಾಥ್ ಗೌಡ ಗೆಲುವು ಸಾಧಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ್ ಗೌಡ, ತಮ್ಮ ಪ್ರತಿಸ್ಪರ್ಧಿ ದೀಪಿಕಾ ರೆಡ್ಡಿ ಎದುರು ಭರ್ಜರಿ ಗೆಲುವು ಸಾಧಿಸಿದ್ದಾರೆ.