ಮಂಗಳೂರು ಬಳಿ ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ: ಐವರು ಭಜರಂಗ ದಳ ಕಾರ್ಯಕರ್ತರ ಬಂಧನ
ಮಂಗಳೂರು: ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ 5 ಮಂದಿ ಭಜರಂಗ ದಳ ಕಾರ್ಯಕರ್ತರನ್ನು ಸುರತ್ಕಲ್ ನಲ್ಲಿ ಬಂಧಿಸಲಾಗಿದೆ.
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ನಿನ್ನೆ ಸಾಯಂಕಾಲ ಸಮುದ್ರ ತೀರಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಈ ಭಜರಂಗದಳ ಕಾರ್ಯಕರ್ತರು ಅಡ್ಡಗಟ್ಟಿ ಹಲ್ಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ನಡೆದಿದ್ದೇನು?: ಮಂಗಳೂರಿನ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಕ್ರಿಶ್ಚಿಯನ್ -ಮುಸ್ಲಿಂ ಯುವಕ-ಯುವತಿಯರ ಒಟ್ಟು 6 ಜನ ಸ್ನೇಹಿತರು ನಿನ್ನೆ ಸಾಯಂಕಾಲ ಮಲ್ಪೆ ಬೀಚ್ ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್ಗೇಟ್ ಬಳಿ ಭಜರಂಗ ದಳ ಕಾರ್ಯಕರ್ತರು ತಡೆದಿದ್ದಾರೆ. ಅನ್ಯಕೋಮಿನ ಯುವಕ-ಯುವತಿಯರ ಕಾರನ್ನು ನಿಲ್ಲಿಸಿ ಪ್ರಶ್ನಿಸಲು ಮುಂದಾದರು.
ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಯುವಕರು ಮತ್ತು ಮುಸ್ಲಿಂ ಯುವಕರ ನಡುವೆ ಜಗಳ ಆರಂಭವಾಗಿ ಅನ್ಯಕೋಮಿನ ಯುವಕ, ಯುವತಿಯರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಘಟನೆ ವೇಳೆ ಸ್ಥಳದಲ್ಲಿ ಇನ್ಸ್ಪೆಕ್ಟರ್ ಶರೀಫ್ ಇದ್ದು, ಹಿಂದೂ ಸಂಘಟನೆ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ವೇಳೆ ಇನ್ಸ್ಪೆಕ್ಟರ್ ಶರೀಫ್ ಕಾರಿನ ಮೇಲೆ ಯುವಕರ ಗುಂಪಿನಿಂದ ಆಗುತ್ತಿದ್ದ ದಾಳಿ ತಡೆದು ಜಗಳವನ್ನು ನಿಯಂತ್ರಿಸಿದರು ಎಂದು ಹೇಳಲಾಗುತ್ತಿದೆ.
ಬಂಧಿತರು: ಪ್ರೀತಂ ಶೆಟ್ಟಿ, ಭಜರಂಗದಳ ಜಿಲ್ಲಾ ಮುಖಂಡ ಅರ್ಶಿತ್, ಭಜರಂಗದಳ ಸುರತ್ಕಲ್ ಮುಖಂಡ ಶ್ರೀನಿವಾಸ್, ರಾಕೇಶ್ ಮತ್ತು ಅಭಿಷೇಕ್ ಅವರನ್ನು ಬಂಧಿಸಿ ಸೆಕ್ಷನ್ 341, 323 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಕಾರಿನಲ್ಲಿ ಇಬ್ಬರು ಕ್ರಿಶ್ಚಿಯನ್ ಹುಡುಗರು, ಒಬ್ಬ ಮುಸ್ಲಿಂ ಹುಡುಗ ಮತ್ತು ಮೂವರು ಮುಸ್ಲಿಂ ಯುವತಿಯರು ಇದ್ದರು ಎಂದು ಮಂಗಳೂರಿನ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಇದೇ ರೀತಿಯ ಘಟನೆ ಕಳೆದ ಸೆಪ್ಟೆಂಬರ್ 17 ರಂದು ನಡೆದಿದ್ದು, ಇಬ್ಬರು ಯುವಕರು ತಮ್ಮ ಮಹಿಳಾ ಸಹೋದ್ಯೋಗಿಯನ್ನು ಅನ್ಯ ಧರ್ಮದ ಯುವಕ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಬಿಟ್ಟದ್ದಕ್ಕಾಗಿ ತಡೆದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿನ ಹೊಸೂರು ರಸ್ತೆಯ ಡೈರಿ ಸರ್ಕಲ್ ಬಳಿ ಯುವತಿಯನ್ನು ಬೈಕ್ ನಲ್ಲಿ ತಂದು ಬಿಟ್ಟ ಯುವಕನ ಮೇಲೆ ಹಲ್ಲೆ ನಡೆದಿದೆ.