ರಾಜ್ಯಸುದ್ದಿ

ಪಾಕಿಸ್ತಾನದ ಗಲ್ಲಿಗಲ್ಲಿಯಲ್ಲೂ ಇಂಥವರು ಇದ್ದಾರೆ: ಭಾರತೀಯ ಬೌಲರ್ ಅಣಕಿಸಿದ ಮಾಜಿ ಆಟಗಾರ..!

ದುಬೈ:ಈ ಬಾರಿಯ ಐಪಿಎಲ್​ನಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿಯನ್ನ (Varun Chakravarthy) ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಮಿಸ್ಟರಿ ಸ್ಪಿನ್ನರ್ (Mystery Spinner) ಎಂಬಂತೆ ಪರಿಗಣಿಸಿ ಎದುರಾಳಿಗಳಿಗೆ ಅಚ್ಚರಿ ಹುಟ್ಟಿಸಲು ವರುಣ್ ಚಕ್ರವರ್ತಿಯನ್ನ ಕಣಕ್ಕಿಳಿಸಲಾಯಿತು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಸ್ಪಿನ್ ಮಂತ್ರ ನಡೆಯಲಿಲ್ಲ. ಒಂದೂ ವಿಕೆಟ್ ದೊರಕಲಿಲ್ಲ. ವರುಣ್ ಚಕ್ರವರ್ತಿ ಮಾತ್ರವಲ್ಲ, ಯಾವ ಭಾರತೀಯ ಬೌಲರ್​ಗೂ ವಿಕೆಟ್ ದಕ್ಕಲಿಲ್ಲ. ಪಾಕಿಸ್ತಾನ ತಂಡ ಏಪಕ್ಷೀಯವಾಗಿ ಪಂದ್ಯ ಗೆದ್ದು ಬೀಗಿತು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ವರುಣ್ ಚಕ್ರವರ್ತಿ ಅವರನ್ನ ಆಯ್ಕೆ ಮಾಡಿದ ಕ್ರಮವನ್ನು ಮಾಜಿ ಪಾಕ್ ಕ್ಯಾಪ್ಟನ್ ಸಲ್ಮಾನ್ ಬಟ್ (Salman Butt) ಲೇವಡಿ ಮಾಡಿದ್ಧಾರೆ. ವರುಣ್ ಚಕ್ರವರ್ತಿಯ ಸ್ಪಿನ್ ಬೌಲಿಂಗ್ ಅನ್ನೂ ಕುಚೋದ್ಯ ಮಾಡಿದ್ಧಾರೆ.

ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಭಾರತ ಪಾಕ್ ಪಂದ್ಯದ ವಿಶ್ಲೇಷಣೆ ಮಾಡುತ್ತಾ ಸಲ್ಮಾನ್ ಬಟ್, ವರುಣ್ ಚಕ್ರವರ್ತಿ ಬೌಲಿಂಗ್ ಮಾಡುವ ರೀತಿ ನೀಡಿದರೆ ಅಂಥ ಬೌಲರ್​ಗಳು ನಮ್ಮ ಗಲ್ಲಿಗಲ್ಲಿಯಲ್ಲೂ ಸಿಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಟೇಪ್ ಬಾಲ್ ಕ್ರಿಕೆಟ್ ಬಹಳ ನೋಡಿದ್ದೇವೆ:

“ವರುಣ್ ಚಕ್ರವರ್ತಿ ಮಿಸ್ಟರಿ ಬೌಲರ್ ಇರಬಹುದು. ಆದರೆ, ನಮಗೆ ಅವರೇನೂ ಅಚ್ಚರಿ ಅಲ್ಲ. ಪಾಕಿಸ್ತಾನದಲ್ಲಿ ಬಚ್ಚಾ ಹುಡುಗರು ಟೇಪ್ ಬಾಲ್ ಕ್ರಿಕೆಟ್ ಬಹಳ ಆಡುತ್ತಾರೆ. ಚೆಂಡಿನ ಮೇಲೆ ಫಿಂಗರ್ ಟ್ರಿಕ್ ಮಾಡುವುದು, ವಿವಿಧ ವೇರಿಯೇಶನ್ ಪ್ರಯತ್ನಿಸುವುದು ಇಂಥ ಬೌಲಿಂಗ್ ಅನ್ನು ಪಾಕಿಸ್ತಾನದ ಗಲ್ಲಿ ಕ್ರಿಕೆಟ್​ನಲ್ಲಿ ಪ್ರತಿಯೊಬ್ಬ ಹುಡುಗನೂ ಮಾಡಬಲ್ಲ” ಎಂದು ಹೇಳಿದ್ಧಾರೆ.

ಅಜಂತಾ ಮೆಂಡಿಸ್​ಗೆ ವರುಣ್ ಹೋಲಿಕೆ:

ತಮ್ಮ ಈ ವಿಡಿಯೋದಲ್ಲಿ ಸಲ್ಮಾನ್ ಬಟ್ ಅವರು ವರುಣ್ ಚಕ್ರವರ್ತಿಯನ್ನ ಶ್ರೀಲಂಕಾದ ಅಜಂತಾ ಮೆಂಡಿಸ್​ಗೆ ಹೋಲಿಕೆ ಮಾಡಿದರು.

“ಶ್ರೀಲಂಕಾದ ಅಜಂತಾ ಮೆಂಡಿಸ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಬಹಳಷ್ಟು ತಂಡಗಳಿಗೆ ಉತ್ತರ ಸಿಗದ ಪ್ರಶ್ನೆಯಾಗಿದ್ದರು. ಆದರೆ, ಪಾಕಿಸ್ತಾನದ ಮೇಲೆ ಅವರ ದಾಖಲೆ ಅಷ್ಟೇನೂ ಉತ್ತಮವಿಲ್ಲ. ಸ್ವಲ್ಪ ವರ್ಷಗಳ ನಂತರ ಮೆಂಡಿಸ್ ಅವರನ್ನ ಭಾರತದ ವಿರುದ್ಧ ಆಡಿಸುವುದನ್ನೂ ಶ್ರೀಲಂಕಾ ನಿಲ್ಲಿಸಿತು. ಮಿಸ್ಟರಿ ಬೌಲಿಂಗ್​ನಲ್ಲಿ ನಮಗೆ ಯಾವ ಮಿಸ್ಟರಿಯೂ ಕಾಣುವುದಿಲ್ಲ. ಯಾಕೆಂದರೆ ನಾವು ಇಂಥ ಬೌಲರ್​ಗಳೊಂದಿಗೆ ಆಡುತ್ತಲೇ ಬೆಳೆದವರು” ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ಆದ ಅವರು ಹೇಳಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button