IND vs ENG: ಕೊನೆಗೂ ಮಿಂಚಿದ ಫ್ಲಾಪ್ ಬೌಲರ್, ನೆರವಾಯ್ತು ಕನ್ಕಷನ್ ನಿಯಮ! ಸರಣಿ ಕೈವಶ ಮಾಡಿಕೊಂಡ ಭಾರತ

5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 15 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಇರುವಂತೆ ಟಿ20 ಸರಣಿಯನ್ನ ಕೈವಶ ಮಾಡಿಕೊಂಡಿದೆ. ಪುಣೆಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅವರ ಅರ್ಧಶತಕದ ನೆರವಿನಿಂದ 181 ರನ್ಗಳಿಸಿತ್ತು.
182 ರನ್ಗಳ ಗುರಿ ಬೆನ್ನಟ್ಟಿದ ಆಂಗ್ಲಪಡೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 166ಕ್ಕೆ ಆಲೌಟ್ ಆಗುವ ಮೂಲಕ ರನ್ಗಳಿಸಿ 5 ರನ್ಗಳಿಂದ ಸೋಲು ಕಂಡಿತು.
ಭಾರತ ನೀಡಿದ್ದ 182 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಮೊದಲ ವಿಕೆಟ್ಗೆ ಪವರ್ ಪ್ಲೇನಲ್ಲಿ 60ರನ್ಗಳ ಜೊತೆಯಾಟ ನಡೆಸಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಗೆಲುವಿಗೆ ಕಾರಣರಾಗಿದ್ದ ಬೆನ್ ಡಕೆಟ್ ಇಂದು ಕೂಡ ಅಬ್ಬರಿಸಿದರು. ಕೇವಲ 19 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ಗಳಿಸಿದರು. ಅಪಾಯಕಾರಿಯಾಗುತ್ತಿದ್ದ ಜೋಡಿಯನ್ನ ರವಿ ಬಿಷ್ಣೋಯ್ ತಮ್ಮ ಪವರ್ ಪ್ಲೇನ ಕೊನೆಯ ಎಸೆತದಲ್ಲಿ ಡಕೆಟ್ ವಿಕೆಟ್ ಪಡೆಯುವ ಮೂಲಕ ದೊಡ್ಡ ಬ್ರೇಕ್ ನೀಡಿದರು. ಇನ್ನು ಮತ್ತೊಬ್ಬ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಇಂದು ಕೂಡ ವಿಫಲರಾದರು. 21 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.

ಡಕೆಟ್ ವಿಕೆಟ್ ಪಡೆದು ಬ್ರೇಕ್ ನೀಡಿದ್ದ ಬಿಷ್ಣೋಯ್ ತಮ್ಮ ಮುಂದಿನ ಓವರ್ನಲ್ಲಿ ವಿಧ್ವಂಸಕ ಆಟಗಾರ ಜೋಸ್ ಬಟ್ಲರ್ ವಿಕೆಟ್ ಪಡೆದು ಇಂಗ್ಲೆಂಡ್ ದೊಡ್ಡ ಹೊಡೆತ ನೀಡಿದರು. ಅಲ್ಲಿಂದ ಇಂಗ್ಲೆಂಡ್ ತಂಡ ಚೇತರಿಸಿಕೊಳ್ಳಲು ಭಾರತೀಯ ಬೌಲರ್ಗಳು ಅವಕಾಶ ನೀಡಲಿಲ್ಲ. ಕಳೆದ ಪಂದ್ಯದಲ್ಲಿ 43 ರನ್ಗಳಿಸಿ ಅಬ್ಬರಿಸಿದ್ದ ಲಿವಿಂಗ್ಸ್ಟೋನ್ ಕನ್ಕಷನ್ ಮೂಲಕ ತಂಡಕ್ಕೆ ಸೇರಿದ್ದ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟ್ ಆದರು.
ಭೀತಿ ಹುಟ್ಟಿಸಿದ್ದ ಬ್ರೂಕ್
ಮೊದಲ ಮೂರು ಪಂದ್ಯಗಳಲ್ಲಿ ದಯನೀಯ ವೈಫಲ್ಯವಾಗಿದ್ದ ಹ್ಯಾರಿ ಬ್ರೂಕ್ ಇಂದು ಅದ್ಭುತ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 51 ರನ್ಗಳಿಸಿದರು. ದುರಾದೃಷ್ಟವಶಾತ್ ಇಂದೂ ಕೂಡ ಅವರು ವರುಣ್ ಚಕ್ರವರ್ತಿ ಬೌಲಿಂಗ್ನಲ್ಲೇ ಔಟ್ ಆದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಲು ಭಾರತೀಯ ಬೌಲರ್ಗಳು ಬಿಡಲಿಲ್ಲ.
ಲಿಯಾಮ್ ಲಿವಿಂಗ್ಸ್ಟೋನ್ (9), ಜಾಕೋಬ್ ಬೆಥೆಲ್ (6), ಬ್ರಿಡೆನ್ ಕಾರ್ಸ್ (0) ಬಂದಷ್ಟೇ ವೇಗವಾಗಿ ವಿಫಲರಾದರು. ಜೇಮೀ ಓವರ್ಟನ್ 19 ರನ್ಗಳಿಸಿ ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿದರು. ಜೋಪ್ರಾ ಆರ್ಚರ್ (0), ಆದಿಲ್ ರಶೀದ್ ಅಜೇಯ 10 ರನ್ಗಳಿಸಿದರು.
ಭಾರತದ ಪರ ಹರ್ಷಿತ್ ರಾಣಾ 33ಕ್ಕೆ 3, ರವಿ ಬಿಷ್ಣೋಯ್ 28ಕ್ಕೆ 3, ವರುಣ್ ಚಕ್ರವರ್ತಿ 28ಕ್ಕೆ 2, ಅರ್ಷದೀಪ್ ಸಿಂಗ್ 35ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಾಂಡ್ಯ-ದುಬೆ ಅಬ್ಬರ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 12 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ರಿಂಕು ಸಿಂಗ್ (30), ಹಾರ್ದಿಕ್ ಪಾಂಡ್ಯ (53) ಹಾಗೂ ಶಿವಂ ದುಬೆ (53) ಅದ್ಭುತ ಪ್ರದರ್ಶನ ತೋರಿ 181ರನ್ಗಳ ಸವಾಲಿನ ಮೊತ್ತಕ್ಕೆ ಕಾರಣವಾದರು.
5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯಗಳನ್ನ ಗೆದ್ದಿತ್ತು. ನಂತರ 3ನೇ ಪಂದ್ಯದಲ್ಲಿ ಸೋಲು ಕಂಡಿದ್ದ ಸೂರ್ಯಕುಮಾರ್ ಪಡೆ, 4ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನ 3-1ರಲ್ಲಿ ವಶಪಡಿಸಿಕೊಂಡಿದೆ.
ವರದಿ : ಮೊಹಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು