ಮಹಾಕುಂಭದಲ್ಲಿ ಕಾಲ್ತುಳಿತದಿಂದ 10 ಜನ ಸಾವಿಗೀಡಾದ ಶಂಕೆ; 30ಕ್ಕೂ ಹೆಚ್ಚು ಜನರಿಗೆ ಗಾಯ, ಅಮೃತ ಸ್ನಾನ ತಾತ್ಕಾಲಿಕ ಸ್ಥಗಿತ!

ಪ್ರಯಾಗ್ರಾಜ್ನ (Prayagraj) ಸಂಗಮ್ ಘಾಟ್ನಲ್ಲಿ ಆಯೋಜಿಸಲಾದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭದಲ್ಲಿ (Mahakumbh) ಸಂಭವಿಸಿದ ಕಾಲ್ತುಳಿತದಂತಹ (Stampede) ಪರಿಸ್ಥಿತಿಯಲ್ಲಿ ಸುಮಾರು 10 ಜನರು ಸಾವನ್ನಪ್ಪಿರುವ ಶಂಕೆ (Feared Dead) ವ್ಯಕ್ತವಾಗಿದ್ದು, ಕನಿಷ್ಠ 30 ಮಹಿಳೆಯರು ಗಾಯಗೊಂಡಿದ್ದಾರೆ.
ಮೌನಿ ಅಮಾವಾಸ್ಯೆಯ ಬೆಳಿಗ್ಗೆ ನೂಕುನುಗ್ಗಲು ಸಂಭವಿಸಿದ ನಂತರ ಪವಿತ್ರ ಸ್ನಾನವನ್ನು ಅಖಾಡಗಳು ರದ್ದುಗೊಳಿಸಿವೆ. ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಘಾಟ್ನಲ್ಲಿ ನಿಯೋಜಿಸಲಾಗಿದೆ ಮತ್ತು ಗಾಯಾಳುಗಳನ್ನು ಸೆಕ್ಟರ್ 2 ರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಯೋಗಿ ಆದಿತ್ಯನಾಥ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಕರೆ
ಕಾಲ್ತುಳಿತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸಿದರು. ಮಹಾಕುಂಭಮೇಳದಲ್ಲಿ ಇದುವರೆಗೆ ನಡೆದಿರುವ ಬೆಳವಣಿಗೆಗಳನ್ನು ಪರಿಶೀಲಿಸಿದ ಪ್ರಧಾನಿ, ತಕ್ಷಣದ ಕ್ರಮಗಳಿಗೆ ಸೂಚನೆ ನೀಡಿದರು. ಮೌನಿ ಅಮಾವಾಸ್ಯೆಯಂದು ಮುಂಜಾನೆ ಡ್ರೋನ್ ದೃಶ್ಯಗಳಲ್ಲಿ ಸಂಗಮ ಘಾಟ್ನಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದು ಕಂಡುಬಂದಿತು. ಸಂಗಮದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದರು.
ಅಧಿಕಾರಿ ಹೇಳಿದ್ದೇನು?ಪರಿಸ್ಥಿತಿಯ ಬಗ್ಗೆ ಮಾತನಾಡಿದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ, ‘ಸಂಗಮ ಮಾರ್ಗಗಳಲ್ಲಿ, ಕೆಲವು ಬ್ಯಾರಿಕೇಡ್ಗಳು ಮುರಿದು ನೂಕುನುಗ್ಗಲಿನಂತಹ ಪರಿಸ್ಥಿತಿ ಉಂಟಾಗಿದೆ, ಕೆಲವರು ಗಾಯಗೊಂಡಿದ್ದಾರೆ, ಅವರು ಚಿಕಿತ್ಸೆಯಲ್ಲಿದ್ದಾರೆ. ಗಂಭೀರ ಪರಿಸ್ಥಿತಿ ಏನಿಲ್ಲ’ ಎಂದು ತಿಳಿಸಿದ್ದಾರೆ.ಘಟನೆ ನಡೆದಿದ್ದು ಹೇಗೆ?ಕಾಲ್ತುಳಿತದ ಸಮಯದಲ್ಲಿ ಹಾಜರಿದ್ದ ಲೋಕಲ್ -18 ವರದಿಗಾರ ರಜನೀಶ್ ಯಾದವ್, ಈ ಬಗ್ಗೆ ವಿವರ ನೀಡುತ್ತಾ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸಂಗಮ್ ಸುತ್ತಮುತ್ತ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಯಿತು. ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಲು 45 ಘಾಟ್ಗಳನ್ನು ನಿರ್ಮಿಸಲಾಗಿದ್ದರೂ, ಜನರು ಮುಖ್ಯ ಸಂಗಮದಲ್ಲಿ ಮಾತ್ರ ಸ್ನಾನ ಮಾಡಬೇಕೆಂದು ಹಠ ಮಾಡುತ್ತಿದ್ದರು. ಇದರಿಂದಾಗಿ ಜನಸಮೂಹ ಒಬ್ಬರನ್ನೊಬ್ಬರು ತಳ್ಳುತ್ತಾ ಮುಂದಕ್ಕೆ ಚಲಿಸಲು ಪ್ರಾರಂಭಿಸಿತು. ಇದರಿಂದಾಗಿ ಜನಸಂದಣಿಯನ್ನು ನಿಯಂತ್ರಿಸಲು ಹಾಕಲಾದ ಬ್ಯಾರಿಕೇಡ್ಗಳು ಮುರಿಯಲು ಪ್ರಾರಂಭಿಸಿದವು. ಶೀಘ್ರದಲ್ಲೇ ಕೆಲವು ಮಹಿಳೆಯರಿಗೆ ಉಸಿರುಗಟ್ಟಿದೆಮತ್ತು ಕೆಳಗೆ ಬೀಳಲು ಪ್ರಾರಂಭಿಸಿದರು. ಇದರಿಂದಾಗಿ ಕಾಲ್ತುಳಿತ ಮತ್ತಷ್ಟು ಹೆಚ್ಚಾಯಿತು ಮತ್ತು ಜನರು ಕೂಗಾಡಲು ಮತ್ತು ಕಿರುಚಲು ಪ್ರಾರಂಭಿಸಿದರು. ಆ ದೃಶ್ಯ ತುಂಬಾ ಭಯಾನಕವಾಗಿತ್ತು ಎಂದು ತಿಳಿಸಿದ್ದಾರೆ.
ಅಖಾಡಗಳಿಂದ ಅಮೃತ ಸ್ನಾನ ಸ್ಥಗಿತ
ಮೌನಿ ಅಮವಾಸ್ಯೆಯಂದು, ಭಕ್ತರು ಸಂಗಮ ಘಾಟ್ನಲ್ಲಿ ಅಮೃತ ಸ್ನಾನ ಅಥವಾ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಬೇಕಿತ್ತು. ಕಾಲ್ತುಳಿತದಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಪ್ರಸ್ತುತ ಅಖಾಡಗಳಿಂದ ಅಮೃತ ಸ್ನಾನವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ನಂತರ ನಡೆಸುವುದಾಗಿ ನಿರ್ಧರಿಸಲಾಯಿತು.
ಮೂಲಗಳ ಪ್ರಕಾರ, ನೂಕುನುಗ್ಗಲು ಸಂಭವಿಸಿದಾಗ ಮತ್ತು ಬ್ಯಾರಿಕೇಡ್ ಮುರಿದು ಜನರು ಪರಸ್ಪರರ ಮೇಲೆ ಬಿದ್ದಾಗ ಕೆಲವು ಮಹಿಳೆಯರಿಗೆ ಭಾರೀ ಗುಂಪಿನಲ್ಲಿ ಉಸಿರುಗಟ್ಟಿದ ಅನುಭವವಾಗಿದೆ. ಕಾಲ್ತುಳಿತದ ನಂತರ, ಮಹಾಕುಂಭದ ವ್ಯವಸ್ಥೆಯಲ್ಲಿ ಆಡಳಿತವು ಬದಲಾವಣೆಗಳನ್ನು ಮಾಡಿದೆ. ಸಂಗಮ ನಗರಕ್ಕೆ ಭಕ್ತರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಜನರ ಗುಂಪನ್ನು ನಗರದ ಹೊರಗೆ ನಿಲ್ಲಿಸಲಾಗಿದೆ.