ಗಡಿಯಲ್ಲಿ ಒಳನುಸುಳಲೆತ್ನಿಸಿದ ಪಾಕ್ ಉಗ್ರನ ಹತ್ಯೆ
ನವದೆಹಲಿ, ಸೆ.28- ಪಾಕಿಸ್ತಾನದಿಂದ ಭಾರತದೊಳಗೆ ನುಸಳುವ ಯತ್ನ ನಡೆಸಿದ ಭಯೋತ್ಪಾದಕರ ಪೈಕಿ ಒಬ್ಬನನ್ನು ಉರಿ ಸೆಕ್ಟರ್‍ನಲ್ಲಿ ಹತ್ಯೆ ಮಾಡಲಾಗಿದ್ದು, ಮತ್ತೊಬ್ಬನನ್ನು ಜೀವಂತವಾಗಿ ಹಿಡಿಯಲಾಗಿದೆ. ಸೆಪ್ಟಂಬರ್ 18-19ರಿಂದ ಗಡಿ ಭಾಗದಲ್ಲಿ ಅಕ್ರಮ ನುಸುಳುವಿಕೆ ಚಟುವಟಿಕೆಗಳು ನಡೆಯುತ್ತಿವೆ.
ಶನಿವಾರ ಉರಿ ಸೆಕ್ಟರ್‍ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಭಾರತೀಯ ಯೋಧರು ನುಸುಳುವಿಕೆ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿದರು.ಮೂರು ಜಾಗದಲ್ಲಿ ಕಳೆದೆರಡು ದಿನಗಳಿಂದ ಶಂಕಾಸ್ಪದ ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆದಿದೆ. ಆ ವೇಳೆ ಒಬ್ಬ ಪಾಕಿಸ್ತಾನಿ ನುಸುಳುಕೋರ ಹತ್ಯೆಯಾಗಿದ್ದು, ಮತ್ತೊಬ್ಬನನ್ನು ಸೆರೆ ಹಿಡಿಯಲಾಗಿದೆ.
ಈ ವೇಳೆ ಗುಂಡಿನಚಕಮಕಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಸೇನೆ ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವಾರ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಸೇನೆ ಹತ್ಯೆ ಮಾಡಿ ಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನೆ ವಶ ಪಡಿಸಿಕೊಂಡಿತ್ತು. ಈಗ ಉರಿ ಸೆಕ್ಟರ್‍ನಲ್ಲಿ ಮತ್ತೊಂದು ಸುತ್ತಿನ ಚಕಮಕಿ ನಡೆದಿದೆ. ಆದರೆ ಪಾಕ್ ನುಸಳುಕೋರರನ್ನು ತಡೆಯುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.