ರಾಯಚೂರು: ನಿಧಿ ಹುಡುಕಿ ಕೊಡುವುದಾಗಿ ನಂಬಿಸಿ 28 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಆರೋಪಿ ಬಂಧನ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಬಳಿಯ ಕೋಠಾ ಗ್ರಾಮದಲ್ಲಿ ನಿಧಿ ಹುಡುಕಿ ಕೊಡುವುದಾಗಿ ನಂಬಿಸಿ ರೂ. 28 ಲಕ್ಷ ಹಣ ಪಡೆದು ಪರಾರಿಯಾಗಿದ್ದ, ಆರೋಪಿಯನ್ನು ಹಟ್ಟಿ ಠಾಣೆಯ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಗಾವತಿ ತಾಲೂಕಿನ ಉಡುಕಲ್ಲು ಗ್ರಾಮದ ನಿವಾಸಿ ಶರಣಪ್ಪ ( 42) ವರ್ಷ ಬಂಧಿತ ಆರೋಪಿ.
ಘಟನೆ ವಿವರ: ಆರೋಪಿ ಶರಣಪ್ಪ 2023ರ ಮೇ 22ರಂದು ಕೋಠ ಗ್ರಾಮದ ನಿವಾಸಿ ಅಲ್ಲಾಸಾಬ್ ಅವರ� ಹೊಲದಲ್ಲಿ ನಿಧಿ ಇದೆ. ಹುಡುಕಿ ಕೊಡುತ್ತೇನೆ ನನಗೆ ಮೊದಲು 28 ಲಕ್ಷ ರೂಪಾಯಿ ಕೊಡಬೇಕು ಎಂದು ಷರತ್ತು ಹಾಕಿದ್ದ, ಅದಕ್ಕೆಒಪ್ಪಿದ ಅಲ್ಲಾಸಾಬ್ ಮುಂಗಡವಾಗಿ ಹಣ ನೀಡಿದ್ದ ಎನ್ನಲಾಗಿದೆ. ಅದೇ ದಿನ ಅಂದರೆ ಮೇ 22ರಂದು ಮಧ್ಯರಾತ್ರಿ1 ಗಂಟೆಗೆ ಅಲ್ಲಾಸಾಬ್ ಅವರನ್ನು ಹೊಲಕ್ಕೆ ಕರೆದುಕೊಂಡುಹೋಗಿ ಪೂಜೆ ಮಾಡಿ ಗುದ್ದಲಿಯಿಂದ ತಾನೇ ಗುಂಡಿ ಅಗೆದಿದ್ದಾನೆ. ಅಲ್ಲಿ ತಾನೇ ಇಟ್ಟಿದ್ದ ಕಿತ್ತಾಳೆ ಕೊಡದಲ್ಲಿ ಬಂಗಾರವಿದೆ ಎಂದು ಚೀಲದಲ್ಲಿ ಕಟ್ಟಿ ನೀಡಿದ್ದಾನೆ. ಮನೆಗೆ ಹೋಗಿ ಪ್ರತಿನಿತ್ಯ 11 ತಿಂಗಳ ಕಾಲ ಇದಕ್ಕೆ ಪೂಜೆ ಮಾಡಬೇಕು. ನಂತರ ನಾನು ಮತ್ತೆ ನಿಮ್ಮ ಮನೆಗೆ ಬಂದು ಪೂಜೆ ಮಾಡಿ ಇದನ್ನು ಕಳಚಿಕೊಡುತ್ತೇನೆ ಅಲ್ಲಿಯವರೆಗೆ ನೋಡಬೇಡಿ ಎಂದು ರೂ.28 ಲಕ್ಷ ಹಣ ಪಡೆದು ಪರಾರಿಯಾಗಿದ್ದಾನೆ.ಆರೋಪಿಯ ಮಾತಿನಿಂತೆ 11 ತಿಂಗಳ ಕಾಲ ಅಲ್ಲಾಸಾಬ್ ಪೂಜೆ ಮಾಡಿದ್ದಾನೆ. 2025, ಜನವರಿ 5 ರಂದು ಕಿತ್ತಾಳೆ ಕೊಡದಲ್ಲಿ ಸುತ್ತಿಕೊಟ್ಟ ಚೀಲವನ್ನು ನೋಡಿದಾಗ ಬಂಗಾರದ ಬಣ್ಣಬಳಿದ ಪ್ಲೇಟ್ ಗಳು ಕಂಡು ಗಾಬರಿಯಾಗಿ ತಾನು ಮೋಸ ಹೋಗಿದ್ದು ಅರಿವಾಗಿದೆ.
ಹಣಕೊಟ್ಟು ಮೋಸ ಹೋದ ಅಲ್ಲಾಸಾಬ್, ಕಳೆದ ಜನವರಿ 20 ರಂದು ಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಿಎಸ್‌ಐ ಹೊಸಕೆರಪ್ಪ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡು ಜನವರಿ 22ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತನಿಂದ 5.60 ಲಕ್ಷ ನಗದು ಹಣ , 6 ಗೋಲ್ಡ್ ಬಣ್ಣದ ಕಬ್ಬಿಣದ ಪ್ಲೇಟ್ ತುಂಡುಗಳನ್ನು ವಶ ಪಡಿಸಿಕೊಂಡಿದ್ದಾರೆ.
ವರದಿ: ಮುಸ್ತಾಫಾ tv8kannada ಲಿಂಗಸುಗೂರು