Tirupati: ವೈಕುಂಠ ಏಕಾದಶಿಯಂದು ತಿರುಪತಿಯಲ್ಲಿ ಭಕ್ತ ಸಾಗರ- ಕಾಲ್ತುಳಿತ ಗಾಯಾಳುಗಳಿಗೆ ವಿಶೇಷ ದರ್ಶನ

ಆಂಧ್ರಪ್ರದೇಶ: ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ವೈಕುಂಠ ದ್ವಾರ ದರ್ಶನಕ್ಕೆ ಇಂದಿನಿಂದ ಅವಕಾಶ ನೀಡಲಾಗಿದ್ದು ಭಕ್ತ ಸಾಗರವೇ ಹರಿದು ಬರುತ್ತಿದೆ.
ಇಂದಿನಿಂದ ಹತ್ತು ದಿನಗಳ ಕಾಲ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶವಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ಟಿಟಿಡಿ ತಿಳಿಸಿದೆ. ಹೀಗಾಗಿ ಮಕ್ಕಳು, ವಯಸ್ಸಾದವರು ಹಾಗೂ ಅಂಗ ವೈಫಲ್ಯ ಹೊಂದಿರುವ ಭಕ್ತರು ಈ ಸಮಯದಲ್ಲಿ ದರ್ಶನವನ್ನು ಪಡೆಯಲು ನೂರು ಬಾರಿ ಯೋಚನೆ ಮಾಡುವುದು ಸೂಕ್ತ.ಯಾಕೆಂದರೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಕಾಲ್ತುಳಿತದ ದುರಂತ ಸಂಭವಿಸಿದ್ದು, ಸುಮಾರು ಆರು ಮಂದಿ ಸಾವನ್ನಪ್ಪಿದ್ದಾರೆ. ವಾರ್ಷಿಕ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಪಡೆಯಲು ನೂರಾರು ಭಕ್ತರು ಸೇರಿದ ಸಂದರ್ಭದಲ್ಲಿ (ಜನವರಿ 8ರ ಸಂಜೆ) ಈ ದುರ್ಘಟನೆ ನಡೆದಿದೆ.ಜನವರಿ 10 ರಿಂದ ಪ್ರಾರಂಭವಾಗುವ 10 ದಿನಗಳ ಈ ಉತ್ಸವದಂದು ದೇವಾಲಯದ ಉತ್ತರ ದ್ವಾರ ಅಥವಾ ವೈಕುಂಠ ದ್ವಾರದಿಂದ ಭಕ್ತರಿಗೆ ದೇವರನ್ನು ನೋಡಲು ಅನುವು ಮಾಡಿಕೊಡಲಾಗುತ್ತದೆ. ಹೀಗಾಗಿ ದೇವರನ್ನು ಕಣ್ತುಂಬಿಕೊಳ್ಳಲು ತಿರುಪತಿಯಲ್ಲಿ ಭಕ್ತ ಸಾಗರವೇ ಸೇರಿದೆ.
ವೈಕುಂಠ ದ್ವಾರ ತಿರುಮಲ ದೇವಸ್ಥಾನದ ಪಕ್ಕದಲ್ಲಿರುವ ವಿಶೇಷ ದ್ವಾರವಾಗಿದೆ. ಈ ದ್ವಾರವನ್ನು ವೈಕುಂಠ ಏಕಾದಶಿಯ ಶುಭ ದಿನದಂದು ಮಾತ್ರ ತೆರೆಯಲಾಗುತ್ತದೆ. ಭಕ್ತರು ಈ ದ್ವಾರದ ಮೂಲಕ ವೆಂಕಟೇಶ್ವರ ದೇವರನ್ನು ಕಂಡು ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಈ ಅಸಾಧಾರಣ ಆಚರಣೆಯಲ್ಲಿ ಭಾಗವಹಿಸಲು ದೂರದೂರದಿಂದ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಇದೊಂದು ಮರೆಯಲಾಗದ ಅನುಭವವಾಗಿದೆ. ಅಲ್ಲದೆ ವೈಕುಮಠ ದ್ವಾರ ತೆರೆದ ಬಳಿಕ ದೇವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.ಹಾಗಾದರೆ ಜನವರಿ 10 ರಿಂದ ಪ್ರಾರಂಭವಾಗುವ 10 ದಿನಗಳಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಶುಭ ಸಮಯ ಯಾವುದು ಎಂದು ಈಗ ತಿಳಿಯೋಣ.
ತಿರುಮಲ ವೈಕುಂಠ ಏಕಾದಶಿ 2025: ಪೂಜೆ ಸಮಯ
ಸುಪ್ರಭಾತಂ ಸೇವೆ ಬೆಳಗ್ಗೆ 2:30 ರಿಂದ 3:00ವರೆಗೆ ಎಲ್ಲಾ ದಿನ ನಡೆಯುತ್ತದೆ. ತೋಮಲ ಸೇವೆ ಬೆಳಗ್ಗೆ 3:30 ರಿಂದ 4:00ರವರೆಗೆ ಹಾಗೂ ಬೆಳಗ್ಗೆ 7:00 ರಿಂದ 8:00ರವರೆಗೆ ನಡೆಯುತ್ತದೆ. ಪಂಚಾಂಗ ಶ್ರವಣಂ ಬೆಳಗ್ಗೆ 4:00 ರಿಂದ 4:15 ರವರೆಗೆ, ಸಹಸ್ತ್ರ ನಾಮಾರ್ಚನೆ ಬೆಳಗ್ಗೆ 4:00 ರಿಂದ 5:00ರವರೆಗೆ ಮಾಡಲಾಗುತ್ತದೆ.ಇನ್ನೂ ವಾರದ ದಿನಗಳಲ್ಲಿ ಕಲ್ಯಾಣೋತ್ಸವ, ಬ್ರಹ್ಮೋತ್ಸವ, ವಸಂತೋತ್ಸವ, ಉಂಜಲ್ ಸೇವೆ ಮಧ್ಯಾಹ್ನ 12:00 ರಿಂದ ಸಂಜೆ 5:00 ಗಂಟೆಯವರೆಗೆ ಎಲ್ಲಾ ದಿನ ನಡೆಯಲಿವೆ. ಏಕಾಂತ ಸೇವೆ ಮಧ್ಯಾಹ್ನ 1:30 ರಿಂದ ರಾತ್ರಿ 10:00ರವರೆಗೆ ಪ್ರತಿದಿನ ಮಾಡಲಾಗುತ್ತದೆ. 10 ದಿನಗಳ ಕಾಲ ಲಕ್ಷಾಂತರ ಯಾತ್ರಿಕರು ಪೂಜೆ ಮಾಡಲು ದೇವಾಲಯಕ್ಕೆ ಸೇರುತ್ತಾರೆ. ಭಕ್ತರು ದ್ವಾರವನ್ನು ಪ್ರವೇಶಿಸಿ ವೆಂಕಟೇಶ್ವರನ ಪವಿತ್ರ ಪ್ರದಕ್ಷಿಣೆ ಹಾಕಬಹುದು. ಇದು ನಿಜಕ್ಕೂ ವಿಶಿಷ್ಟ ಮತ್ತು ಆಧ್ಯಾತ್ಮಿಕ ಅನುಭವವಾಗಿದೆ.
ತಿರುಮಲದಲ್ಲಿ ಗಾಯಾಳುಗಳಿಗೆ ವಿಶೇಷ ವೈಕುಂಠ ದ್ವಾರ ದರ್ಶನ
ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ತಿರುಮಲ ಶ್ರೀವಾರಿ ವೈಕುಂಠದ್ವಾರದಲ್ಲಿ ಟಿಟಿಡಿ ದರ್ಶನ ನೀಡಿತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ಆದೇಶದಂತೆ ಒಟ್ಟು 52 ಜನರಿಗೆ ವಿಶೇಷ ದರ್ಶನ ಕಲ್ಪಿಸಲಾಯಿತು. ತಿರುಪತಿ ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಿ ವೈಕುಂಠದ್ವಾರ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಟಿಟಿಡಿಗೆ ಭಕ್ತರು ಧನ್ಯವಾದ ಅರ್ಪಿಸಿದರು. ದರ್ಶನಕ್ಕೆ ಟಿಟಿಡಿ ಉತ್ತಮ ಅವಕಾಶವನ್ನು ಒದಗಿಸಿದೆ ಎಂದು ಅವರು ಹೇಳಿದರು.
ಗುರುವಾರ ಸಂಜೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಮತ್ತು ದೇವರ ದರ್ಶನ ಪಡೆಯುವ ಅವಕಾಶವನ್ನು ಒದಗಿಸಲಾಗುವುದು ಎಂದು ಘೋಷಿಸಿದರು. ಘೋಷಿಸಿದಂತೆ ಟಿಟಿಡಿ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಮಾತನಾಡಿದರು. ಬಳಿಕ ಇಂದು ಎಲ್ಲರಿಗೂ ದೇವರ ದರ್ಶನ ನೀಡಲಾಯಿತು.