ಬೆಂಗಳೂರು ಬೃಹತ್ ಕ್ಯಾಲಿಪರ್ಸ್ ಜೋಡಣಾ ಶಿಬಿರಕ್ಕೆ ತೆರಳುವ ವಿಶೇಷಚೇತನ ಫಲಾನುಭವಿಗಳ ವಾಹನಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ

ಚಾಮರಾಜನಗರ: ಪೋಲಿಯೋ ಪೀಡಿತರಿಗೆ ಉಚಿತ ಕೃತಕ ಕಾಲು ಮತ್ತು ಮುಂಗೈ (ಕ್ಯಾಲಿಪರ್ಸ್) ಜೋಡಣಾ ಶಿಬಿರಕ್ಕೆ ತೆರಳುತ್ತಿರುವ ಜಿಲ್ಲೆಯ ಫಲಾನುಭವಿಗಳ ವಾಹನಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.
ಪೋಲಿಯೋ ಪೀಡಿತರಿಗಾಗಿ ಕೃತಕ ಕಾಲು ಮತ್ತು ಮುಂಗೈಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ ಜೈಪುರದ ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿ ಹಾಗೂ ಬೆಂಗಳೂರು ರೋಟರಿ ಸಂಸ್ಥೆಯ ವತಿಯಿಂದ ಬೆಂಗಳೂರಿನ ಶಿವಾಜಿನಗರದ ಇನ್‍ಫೆಂಟ್ರಿ ರಸ್ತೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಜೋಡಣಾ ಶಿಬಿರಕ್ಕೆ ಕ್ಯಾಲಿಪರ್ಸ್ ಅಗತ್ಯವಿರುವ ಜಿಲ್ಲೆಯ ವಿಶೇಷಚೇತನ ಫಲಾನುಭವಿಗಳನ್ನು ಕರೆದೊಯ್ಯಲಾಗುತ್ತಿರುವ ಬಸ್‍ಗೆ ನಗರದ ರೋಟರಿ ಸಂಸ್ಥೆಯ ಮುಂಭಾಗದಲ್ಲಿಂದು ಅವರು ಹಸಿರು ನಿಶಾನೆ ತೋರಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನಗರದ ವಿಕಲಚೇತನರ ಪುನರ್ವಸತಿ ಕೇಂದ್ರ, ಗ್ರೀನ್ ಸಂಸ್ಥೆ ಹಾಗೂ ಚಾಮರಾಜನಗರ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಜೋಡಣಾ ಶಿಬಿರಕ್ಕೆ ಚಾಮರಾಜನಗರ ಜಿಲ್ಲೆಯಿಂದ 55 ಮಂದಿ ವಿಶೇಷಚೇತನ ಫಲಾನುಭವಿಗಳು ಹೊರಡಲು ವ್ಯವಸ್ಥೆ ಮಾಡಲಾಗಿದ್ದ ವಾಹನಕ್ಕೆ ಶಾಸಕರು ಚಾಲನೆ ನೀಡಿ ಮಾತನಾಡಿದ ಅವರು ಪೋಲಿಯೋ, ಅಂಧತ್ವ ನಿರ್ಮೂಲನೆಗಾಗಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸಮಾಜಮುಖಿ ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ ಸಮಾಜ ಸೇವಾ ಕಾರ್ಯ ಇತರೆ ಸಂಸ್ಥೆಗಳಿಗೂ ಮಾದರಿಯಾಗಿದೆ. ಕಣ್ಣಿನ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಉಚಿತ ಡಯಾಲಿಸಿಸ್, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಏರ್ಪಡಿಸುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ. ರಮೇಶ್, ಡಿಡಿಆರ್‍ಸಿ ನೋಡಲ್ ಅಧಿಕಾರಿ ವೆಂಕಟೇಶ್, ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಕಾರ್ಯದರ್ಶಿ ಹೆಚ್.ಎಂ. ಗುರುಸ್ವಾಮಿ, ಕಾಗಲವಾಡಿ ಚಂದ್ರು, ಕೆಂಪನಪುರ ಸಿದ್ದರಾಜು, ಕೆ.ಎಂ.ಮಹದೇವಸ್ವಾಮಿ, ಅಬ್ದುಲ್ ಅಜೀಜ್ ದೀನಾ, ಗ್ರೀನ್ ಸಂಸ್ಥೆ ಕಾರ್ಯದರ್ಶಿ ಮಹದೇವಸ್ವಾಮಿ ಇತರಿದ್ದರು.
