ಅರ್ಚಕರಿಗೆ ಆರೋಗ್ಯ ವಿಮೆ, ಶೀಘ್ರ ನಿರ್ಧಾರ: ಸಚಿವೆ ಜೊಲ್ಲೆ
ಬೆಂಗಳೂರು, ಸೆಪ್ಟೆಂಬರ್ : ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಧೀನದಲ್ಲಿ ಇರುವಂತಹ ದೇವಸ್ಥಾನಗಳ ಸಿಬ್ಬಂದಿ ಮತ್ತು ಅರ್ಚಕರಿಗೆ ಆರೋಗ್ಯ ವಿಮೆ ಒದಗಿಸುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮುಜರಾಯಿ ಇಲಾಖೆ ಅಧೀನದಲ್ಲಿ ರಾಜ್ಯದಾದ್ಯಂತ 34,000 ಕ್ಕೂ ಅಧಿಕ ದೇವಸ್ಥಾನಗಳು ಇವೆ. ಇದರಲ್ಲಿ ಹೆಚ್ಚಿನ ಆದಾಯ ಬರುವ ದೇವಸ್ಥಾನಗಳನ್ನು “ಎ” ಗ್ರೇಡ್ ಎಂದು, ಕಡಿಮೆ ಆದಾಯ ಗಳಿಸುವ ದೇವಸ್ಥಾನಗಳನ್ನು “ಬಿ” ಗ್ರೇಡ್ ಎಂದು ಹಾಗೂ ಯಾವುದೇ ಆದಾಯ ಇಲ್ಲದ ದೇವಸ್ಥಾನಗಳನ್ನು “ಸಿ” ಗ್ರೇಡ್‌ನಲ್ಲಿ ವಿಂಗಡಿಸಲಾಗಿದೆ. ಈ ಎಲ್ಲಾ ಬಗೆಯ ದೇವಸ್ಥಾನಗಳು ಸೇರಿ ಸುಮಾರು 40,000 ಸಿಬ್ಬಂದಿ ಇದ್ದಾರೆ.
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನಗಳ ಆದಾಯ ಹೆಚ್ಚಳ, ಭಕ್ತರಿಗೆ ಒದಗಿಸುತ್ತಿರುವ ಸೌಲಭ್ಯಗಳು ಮತ್ತು ದೇವಸ್ಥಾನಗಳ ಜೀಣೋದ್ಧಾರದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಇಲಾಖೆಯ ಕಾರ್ಯಚಟುವಟಿಕೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, “ಕೋವಿಡ್ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಬಾಗಿಲು ಮುಚ್ಚಿದ್ದವು. ಈಗ ಎಲ್ಲ ದೇವಸ್ಥಾನಗಳೂ ತೆಗೆದಿದ್ದು, ಭಕ್ತರ ಭೇಟಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವಂತಹ ಸಿಬ್ಬಂದಿ ಮತ್ತು ಅರ್ಚಕರಿಗೆ ಆರೋಗ್ಯ ವಿಮೆ ಒದಗಿಸುವ ಸಂಬಂಧ ಚರ್ಚಿಸಲಾಗಿದೆ. ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಇಲಾಖೆಯ ಎಲ್ಲ ದೇವಸ್ಥಾನಗಳ ಆಸ್ತಿ, ಮಾರ್ಗ ನಕ್ಷೆ ಹಾಗೂ ಧಾರ್ಮಿಕ ಸೇವೆಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ಒದಗಿಸಲು ಐಟಿಎಂಎಸ್ (ಇಂಟಿಗ್ರೆಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಜಾರಿಗೆ ತರಲಾಗುತ್ತಿದೆ. ಇದರಿಂದ ದೇವಸ್ಥಾನಗಳ ಆಸ್ತಿ ರಕ್ಷಣೆಗೂ ಅನುಕೂಲ ಆಗಲಿದೆ. ಭಕ್ತರು ರಾಜ್ಯದ ಎಲ್ಲ ದೇವಸ್ಥಾನಗಳ ಪೂರ್ಣ ಮಾಹಿತಿಯನ್ನು ಒಂದೇ ಕಡೆ ಪಡೆಯಲು ಸಾಧ್ಯವಾಗಲಿದೆ ಎಂದರು.
ದೇವಸ್ಥಾನ ಸಿಬ್ಬಂದಿ ಮತ್ತು ಅರ್ಚಕರಿಗೆ 6ನೇ ವೇತನ ಆಯೋಗ ಜಾರಿ ಮಾಡುವಂತೆ ಅನೇಕ ಶಾಸಕರಿಂದ ಒತ್ತಡ ಬರುತ್ತಿದೆ. ಈಗಾಗಲೇ ಇಲಾಖೆ ವ್ಯಾಪ್ತಿಯಲ್ಲಿ 5ನೇ ವೇತನ ಆಯೋಗ ಜಾರಿ ಮಾಡಲಾಗಿದ್ದು, ಅದರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. 6ನೇ ವೇತನ ಆಯೋಗ ಜಾರಿಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.