ಇತ್ತೀಚಿನ ಸುದ್ದಿ

Contractor suicide: ಬಿಜೆಪಿ ಕೊಟ್ಟ ₹5 ಲಕ್ಷ ಪರಿಹಾರ ತಿರಸ್ಕರಿಸಿದ ಗುತ್ತಿಗೆದಾರ ಸಚಿನ್‌ ಕುಟುಂಬ

ಬೀದರ್: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವು ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇದೇ ವಿಚಾರದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಕೇಳಿಬಂದಿರುವುದರಿಂದ ಕೂಡಲೇ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದೆ. ನಿನ್ನೆ ಮೃತ ಸಚಿನ್ ಅವರ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದೆ.

ಈ ವೇಳೆ ಪರಿಹಾರದ ಹಣವನ್ನು ಸಚಿನ್‌ ಕುಟುಂಬ ತಿರಸ್ಕರಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ನಿನ್ನೆ ಸಚಿನ್‌ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿತು. ಈ ವೇಳೆ ಐದು ಲಕ್ಷ ರೂಪಾಯಿ ಪರಿಹಾರದ ಹಣ ಕೊಡಲು ಮುಂದಾದಾಗ ಕುಟುಂಬಸ್ಥರು ನಿರಾಕರಿಸಿದ್ದಾರೆ. ನಮಗೆ ಹಣ ಬೇಡ, ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾರೆ.

ಮೃತ ಸಚಿನ್‌ ಸ್ವಾಭಿಮಾನದಿಂದ ಬದುಕುವುದನ್ನ ನಮಗೆ ಕಲಿಸಿಕೊಟ್ಟಿದ್ದಾರೆ. ನಮಗೆ ಮೂರು ಹೊತ್ತಿನ ಊಟ ಸಾಕು, ಹಣ ಬೇಡ. ದಯವಿಟ್ಟು ಸಚಿನ್‌ ಸಾವಿಗೆ ನ್ಯಾಯ ಕೊಡಿಸಿ. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡಿಸಿ ಎಂದು ಬೇಡಿಕೊಂಡಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವ ಅಮಾಯಕ ಗುತ್ತಿಗೆದಾರ ಸಚಿನ್ ಅವರ ನಿವಾಸಕ್ಕೆ ತೆರಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. ಅಕ್ಷರಶಃ ಸಚಿನ್ ಸಾವಿನಿಂದ ನೊಂದಿರುವ ಕುಟುಂಬದ ಸ್ಥಿತಿ, ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಹಾಗೂ ಬಂಧುಗಳ ಆಕ್ರಂದನದ ಶಾಪ ಕರ್ನಾಟಕ ಸರ್ಕಾರವನ್ನು ತಟ್ಟದೇ ಬಿಡುವುದಿಲ್ಲ. ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಹೋರಾಟ ನಿಲ್ಲುವುದಿಲ್ಲ. ನೊಂದ ಸಚಿನ್ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.

“ಹೇಳೋದು ಸಿದ್ದಾಂತ ಮಾಡೋದು ದುರಾಚಾರ” ಊರಿಗೆಲ್ಲ ಉಪದೇಶ, ಸಿದ್ಧಾಂತ ಹೇಳುತ್ತಾ ತಾವು ಮಾತ್ರ ನೊಂದವರ ಧ್ವನಿಯಾಗಬಲ್ಲೆವು ಎಂಬ ರೀತಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ನೈಜ ಮುಖವಾಡ ಈ ಘಟನೆಯಿಂದ ಕಳಚಿ ಬಿದ್ದಿದೆ ಎಂದು ಕಿಡಿಕಾರಿದ್ದಾರೆ.

ವಿರೋಧ ಪಕ್ಷದಲ್ಲಿದಾಗ ಇಂಥದ್ದೇ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದವರ ರಾಜೀನಾಮೆಗೆ ಆರ್ಭಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಸರ್ಕಾರದ ಅವಧಿಯಲ್ಲಿ ನಡೆದಿರುವ ಘಟನೆಯ ಹಿನ್ನಲೆಯಲ್ಲಿ ಈ ಕೂಡಲೇ ದುಷ್ಟರು, ಪುಂಡರು, ಕಮಿಷನ್ ವಸೂಲಿಗಾರರನ್ನು ಜೊತೆಗಿಟ್ಟುಕೊಂಡು ಒಬ್ಬ ಅಮಾಯಕ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾಗಿರುವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಂಡು ತನಿಖೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಮಾಡಿಕೊಡಲಿ ಎಂದು ಸವಾಲು ಹಾಕಿದ್ದಾರೆ.

ಮತ್ತೊಂದೆಡೆ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಸರಣಿ ಆತ್ಮಹತ್ಯೆಗಳ ಹಿನ್ನೆಲೆ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಜನಾಂದೋಲನಕ್ಕೆ ಕರೆ ನೀಡಿದೆ. ಇದಕ್ಕಾಗಿ ಎರಡು ಪ್ರತ್ಯೇಕ ಸಮಿತಿಗಳನ್ನೂ ರಚಿಸಿದೆ. ಆಂದೋಲನ ಸಮಿತಿಯಲ್ಲಿ ಛಲವಾದಿ ನಾರಾಯಣಸ್ವಾಮಿ, ಆರಗ ಜ್ಞಾನೇಂದ್ರ, ಎನ್.ಮಹೇಶ್‌, ಅಶ್ವತ್ಥ್‌ ನಾರಾಯಣ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button