ಇತ್ತೀಚಿನ ಸುದ್ದಿ

ರಾಯಚೂರು | ಅಭಿವೃದ್ಧಿ ಅಪೇಕ್ಷೆ: ಗರಿಗೆದರಿದ ಬಜೆಟ್‌ ನಿರೀಕ್ಷೆ

ರಾಯಚೂರು: ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಕೊಡಲಿದೆ. ಹೊಸ ತಾಲ್ಲೂಕು ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದೆ. ವಿಮಾನ ನಿಲ್ದಾಣ ನಿರ್ಮಾಣ ಹಾಗೂ ಸಣ್ಣ ನೀರಾವರಿಗೆ ಉತ್ತೇಜನ ನೀಡಲಿದೆ ಎನ್ನುವ ನಿರೀಕ್ಷೆ ಜಿಲ್ಲೆ ಜನರಲ್ಲಿ ಗರಿಗೆದರಿದೆ.

ರಾಯಚೂರು ಅತ್ಯಂತ ಹಳೆಯ ಜಿಲ್ಲೆಯಾದರೂ ಅಭಿವೃದ್ಧಿ ವಿಷಯದಲ್ಲಿ ಹಿಂದೆ ಇದೆ. ಸಂಘ ಸಂಸ್ಥೆಗಳ ಪ್ರಮುಖರ ಸಭೆ ಕರೆದು ಬೇಕು ಬೇಡಿಕೆಗಳನ್ನು ಆಲಿಸುವ ಪರಿಪಾಠ ಜಿಲ್ಲೆಯಲ್ಲಿ ಇಲ್ಲ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರಬರುವುದಿಲ್ಲ. ಶಾಸಕರೂ ಸಭೆ ನಡೆಸಿ ಜನರ ಅಪೇಕ್ಷೆ ಕೇಳಿಲ್ಲ. ಆದರೂ ಜನರು ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕೊಪ್ಪಳ, ಯಾದಗಿರಿ ಹಾಗೂ ಗದಗನಲ್ಲಿ ಸುಸಜ್ಜಿತ ಜಿಲ್ಲಾಡಳಿತ ಭವನ ಇದೆ. ರಾಯಚೂರು ಜಿಲ್ಲಾಡಳಿತಕ್ಕೆ ದೊಡ್ಡ ಕಟ್ಟಡದ ಅಗತ್ಯವಿತ್ತು. ಹೊಸ ಕಟ್ಟಡದಲ್ಲಿ ನಾಲ್ಕು ಇಲಾಖೆಗಳಿಗೂ ಕಚೇರಿಗಳು ಸಾಲುತ್ತಿಲ್ಲ. ಕಟ್ಟಡ ವಿಸ್ತರಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ.

ರಾಯಚೂರು ಜಿಲ್ಲೆಯ ಸಿರವಾರ ಹಾಗೂ ಮಸ್ಕಿಯಲ್ಲಿ ಹೊಸ ತಾಲ್ಲೂಕು ಕಚೇರಿ ಕಟ್ಟಡಗಳೇ ಇಲ್ಲ. ನಾಲ್ಕು ತಾಲ್ಲೂಕು ಕಚೇರಿಗಳನ್ನು ಬಿಟ್ಟು ಬೇರೆ ಕಚೇರಿಗಳು ಪ್ರಾರಂಭವಾಗಿಲ್ಲ. ತಾಲ್ಲೂಕಿನ ಜನ ಇನ್ನೂ ಮಿನಿ ವಿಧಾನಸೌಧ ನಿರೀಕ್ಷೆಯಲ್ಲೇ ಇದ್ದಾರೆ. ಹೊಸ ತಾಲ್ಲೂಕು ಕಚೇರಿಗೆ ಸರ್ಕಾರ ಅನುದಾನ ಕೊಡುವ ವಿಶ್ವಾಸ ಇದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಹೇಳುತ್ತಾರೆ.

ಮಸ್ಕಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುತ್ತಾರೆ ಎನ್ನುವ ನಿರೀಕ್ಷೆ ಇದೆ. ಕಳೆದ ಬಜೆಟ್‌ನಲ್ಲಿ 5(ಎ) ಉಪ ಕಾಲುವೆ ನಿರ್ಮಾಣಕ್ಕೆ ₹1,000 ಕೋಟಿ ಘೋಷಣೆ ಮಾಡಲಾಗಿತ್ತು. ಇನ್ನೂ ಡಿಪಿಆರ್ ಆಗಿಲ್ಲ‌. ಈ ಬಜೆಟ್‌ನಲ್ಲಿ ಅನುದಾನ ಒದಗಿಸುವ ವಿಶ್ವಾಸದಲ್ಲಿ ಜನ ಇದ್ದಾರೆ.

ಸಿರವಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಮಾಡಿ 10 ವರ್ಷ ಕಳೆದರೂ ಸಿಬ್ಬಂದಿ ನೇಮಕ, ವೈದ್ಯರ ನೇಮಕವಾಗಿಲ್ಲ. ಹೊಸ ತಾಲ್ಲೂಕುಗಳಲ್ಲಿ ತಾಲ್ಲೂಕು ಕ್ರೀಡಾಂಗಣವೂ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಹೊಸ ತಾಲ್ಲೂಕಿಗೆ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ.ಮುದಗಲ್ ತಾಲ್ಲೂಕು ರಚನೆ ಘೋಷಣೆ ಮಾಡಬೇಕು: ರಾಯಚೂರು ಜಿಲ್ಲೆಯಲ್ಲಿಯೇ ದೊಡ್ಡ ಹೋಬಳಿ ಎನಿಸಿಕೊಂಡ ಮುದಗಲ್ ಅನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು ಎನ್ನುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ತಾಲ್ಲೂಕು ಕೇಂದ್ರ ಎಂದು ಘೋಷಣೆ ಮಾಡುವ ಭರವಸೆ ಕೊಟ್ಟಿದ್ದರು. ಈ ಬಾರಿಯ ಬಜೆಟ್‌ನಲ್ಲಾದರೂ ಈ ಆಸೆ ನೆರವೇರಬಹುದೇ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.ಅಗ್ನಿಶಾಮಕ ಠಾಣೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಘಟಕ ಸ್ಥಾಪನೆ ಮಾಡಬೇಕು. ಮುದಗಲ್‌ ಉತ್ಸವ ಆಚರಣೆ ಮಾಡಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ.

ಸಿಂಧನೂರು ಏತ ನೀರಾವರಿ ಯೋಜನೆ

ಸಿಂಧನೂರು ತಾಲ್ಲೂಕಿನಲ್ಲಿ ₹75 ಕೋಟಿ ಅಂದಾಜು ವೆಚ್ಚದ ಸಾಲಗುಂದ ಏತ ನೀರಾವರಿ ಯೋಜನೆ, ನ್ಯಾಕ್ ಕಮಿಟಿಯಿಂದ ಬಿ ಗ್ರೇಡ್ ಮಾನ್ಯತೆ ಪಡೆದ ಸರ್ಕಾರಿ ಪದವಿ ಕಾಲೇಜು ಕಟ್ಟಡಕ್ಕೆ ₹20 ಕೋಟಿ, ₹50 ಕೋಟಿ ವೆಚ್ಚದಲ್ಲಿ ಕೌಶಲ ಮತ್ತು ತರಬೇತಿ ಕೇಂದ್ರ ಘೋಷಣೆ ಮಾಡುವ ನಿರೀಕ್ಷೆ ಇದೆ.

‘ರಾಯಚೂರು -ಗಂಗಾವತಿ ಮುಖ್ಯ ರಸ್ತೆಯಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮನೆಯವರೆಗೆ ಸುಕಾಲ್‌ಪೇಟೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಚತುಷ್ಪಥ ರಸ್ತೆಯನ್ನಾಗಿ ಮಾಡಲು ಹಾಗೂ ಒಳಬಳ್ಳಾರಿ ಬಳಿ ತುಂಗಭದ್ರಾ ನದಿಗೆ ಸುಮಾರು ₹50 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ಕಮ್‌ ವೇರ್ ನಿರ್ಮಾಣದ ಕಾಮಗಾರಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ’ ಎಂದು ಸಿಂಧನೂರಯ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ

‘ಮುಂಡರಗಿ ಏತ ನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಅರಕೇರಾ ಮತ್ತು ದೇವದುರ್ಗ ತಾಲ್ಲೂಕಿನ 12 ಕೆರೆಗಳಿಗೆ ನೀರು ತುಂಬಿಸುವುದು, ದೇವದುರ್ಗ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ. ಬಾಗೂರು ಹತ್ತಿರ ಬ್ರಿಜ್ ಕಮ್ ಬ್ಯಾರೇಜ್‌ಗೆ ಬೇಡಿಕೆ ಸಲ್ಲಿಸಿದ್ದು, ಸರ್ಕಾರ ಬಜೆಟ್‌ನಲ್ಲಿ ಸ್ಪಂದಿಸುವ ನಿರೀಕ್ಷೆ ಇದೆ’ ಎಂದು ದೇವದುರ್ಗ ಶಾಸಕಿ ಕರೆಮ್ಮ ನಾಯಕ ಹೇಳುತ್ತಾರೆ.

ಜಲದುರ್ಗ ಕೋಟೆ ಉತ್ಸವಕ್ಕೆ ಅನುದಾನ ನಿರೀಕ್ಷೆ

ಲಿಂಗಸುಗೂರು ತಾಲ್ಲೂಕಿನ ಮುದಗಲ್ ಹಾಗೂ ಜಲದುರ್ಗ ಕೋಟೆ ಉತ್ಸವ, ಹಟ್ಟಿಗೆ ಬಸ್‌ ಡಿಪೊ ಮಂಜೂರಾತಿ, ಹಟ್ಟಿ, ಆನೆಹೊಸೂರು, ನಾಗರಾಳ ಹೋಬಳಿ ಕೇಂದ್ರಗಳನ್ನಾಗಿ ಘೋಷಣೆಯಾಗುವ ನಿರೀಕ್ಷೆಯಿತ್ತು. ಆದರೆ, ಕಳೆದ ವರ್ಷ ಬಜೆಟ್‌ನಲ್ಲಿ ಘೋಷಣೆಯಾಗಲಿಲ್ಲ. ಈ ಬಾರಿಯೂ ಅದೇ ನಿರೀಕ್ಷೆ ಜನರಲ್ಲಿದೆ.

‘ಕಳೆದ ಬಜೆಟ್‌ನಲ್ಲಿ ನಮ್ಮ ಕ್ಷೇತ್ರಕ್ಕೆ ಯಾವುದೇ ಯೋಜನೆ ಘೋಷಣೆಯಾಗಿಲ್ಲ, ಈ ಬಾರಿ ಕಾಚಾಪುರ, ಅಮರೇಶ್ವರ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಏತ ನೀರಾವರಿ ಜಾರಿಗೆ ಕುರಿತು ಅಂದಾಜು ಪತ್ರಿಕೆ ಸಲ್ಲಿಸಲಾಗಿದೆ. ಲಿಂಗಸುಗೂರು-ನಾರಾಯಣಪುರ ರಸ್ತೆ ಅಭಿವೃದ್ಧಿಗೆ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಹೇಳುತ್ತಾರೆ.

‘ರಾಂಪುರ ಏತ ನೀರಾವರಿ ಯೋಜನೆಯ ನಾಲೆಗಳಲ್ಲಿ ಹೂಳು ತುಂಬಿದ್ದು, ಕೆಲವೆಡೆ ಹಾಳಾಗಿದ್ದರಿಂದ ಕೊನೆ ಭಾಗದ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ರಾಂಪುರ ನಾಲೆಗಳ ಆಧುನೀಕರಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಮನವಿ ಮಾಡುತ್ತಾರೆ.

Related Articles

Leave a Reply

Your email address will not be published. Required fields are marked *

Back to top button