IND vs WI: ವೆಸ್ಟ್ ಇಂಡೀಸ್ ವಿರುದ್ಧ ಭಾರತ ವನಿತೆಯರಿಗೆ ಸರಣಿ ಗೆಲುವು

ವಡೋದರ: ದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ವೆಸ್ಟ್ ಇಂಡೀಸ್ ಬ್ಯಾಟರ್‌ಗಳನ್ನು ಟೀಮ್ ಇಂಡಿಯಾ ಬೌಲರ್‌ಗಳು ಇನ್ನಿಲ್ಲದಂತೆ ಕಾಡಿದರು. ಅದೇ ರಾಗ ಅದೇ ಹಾಡಿನಂತೆ ಭಾರತ ಎದುರು ವೆಸ್ಟ್ ಇಂಡೀಸ್ ಅಬ್ಬರಿಸಲಿಲ್ಲ. ಪರಿಣಾಮ ವಿಂಡೀಸ್ 38.5 ಓವರ್ ಗಳಲ್ಲಿ ಕೇವಲ 162 ರನ್ ಗಳಿಗೆ ಆಲೌಟಾಯಿತು. ಭಾರತ ಪರ ದೀಪ್ತಿ ಶರ್ಮಾ 6 ವಿಕೆಟ್ ಕಬಳಿಸಿ ಮಿಂಚಿದರೆ, ರೇಣುಕಾ ಸಿಂಗ್ 4 ವಿಕೆಟ್ ಪಡೆದು ವಿಂಡೀಸ್ ಸರ್ವಪತನಕ್ಕೆ ಕಾರಣವಾದರು.ವೆಸ್ಟ್ ಇಂಡೀಸ್ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಪರ ಎಡಗೈ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ನಿರಾಸೆ ಮೂಡಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ ಮಂಧಾನ ಅಂತಿಮ ಪಂದ್ಯದಲ್ಲಿ ಕೇವಲ 4 ರನ್ ಗಳಿಗೆ ವಿಕೆಟ್ ಕಳೆದುಕೊಂಡರು. ಬಳಿಕ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.
ಪ್ರತಿಕಾ ರಾವಲ್ (18), ನಾಯಕಿ ಹರ್ಮನ್ ಪ್ರೀತ್ ಕೌರ್ (32), ರೋಡ್ರಿಗಸ್ (29) ಉತ್ತಮ ಆರಂಭ ಪಡೆದರೂ, ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡುವಿದರು. ಕೊನೆಯಲ್ಲಿ ದೀಪ್ತಿ ಶರ್ಮಾ ಅಜೇಯ 39, ರಿಚಾ ಘೋಶ್ 23 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ತಂಡ 28.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.