ದೇಶ

ಭಾರತದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಧೀಮಂತ ನಾಯಕ ಡಾ.ಮನ ಮೋಹನ್ ಸಿಂಗ್,

ಹೌದು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಇಂದು (ಗುರುವಾರ) ದೆಹಲಿಯಲ್ಲಿ ನಿಧನರಾಗಿದ್ದಾರೆ. ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಆರೋಗ್ಯ ಗಂಭೀರವಾದ ನಂತರ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಿಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಇತ್ತು, ರಾತ್ರಿ 10 ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ.

1991 ರಿಂದ 1996 ರವರೆಗೆ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾದ ಬಳಿಕ ಮುನ್ನಲೆಗೆ ಬಂದರು. ಭಾರತದ ಆರ್ಥಿಕ ಚಿತ್ರಣ ಬದಲಿಸುವ ಹಲವು ಸುಧಾರಣೆಗಳನ್ನು ತಂದರು. 2004 ರಿಂದ 2014 ರವರೆಗೆ ದಶಕಗಳ ಕಾಲ ಪ್ರಧಾನಿಯಾಗಿದ್ದ ಅವರು, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದರು.

ಹಣಕಾಸು ಸಚಿವರಾಗಿ ಸಾಧನೆ

1991ರಲ್ಲಿ ಪಿವಿ ನರಸಿಂಹರಾವ್ ಸರ್ಕಾರದ ಅಡಿಯಲ್ಲಿ ಹಣಕಾಸು ಸಚಿವರಾಗಿ ಕೆಲಸ ಮಾಡಿದ ಅವರು, ಆರ್ಥಿಕ ಉದಾರೀಕರಣ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಭಾರತದಲ್ಲಿ ವಿದೇಶಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿದ್ದು ಅವರು ಹಣಕಾಸು ಸಚಿವರಾಗಿದ್ದ ಕಾಲದಲ್ಲಿ. ಕೈಗಾರಿಕೆಗಳ ಅಭಿವೃದ್ಧಿಗೆ ಇದು ಬುನಾದಿಯಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ವೇಗ ನೀಡಿತು.

ಪ್ರಧಾನಿಯಾಗಿ ಮನಮೋಹನ್ ಸಿಂಗ್ ಸಾಧನೆ

2004ರಲ್ಲಿ ಯುಪಿಎ ಸರ್ಕಾರ ಬಹುಮತ ಪಡೆದಾಗ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾದಗ ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ಮನಮೋಹನ್ ಸಿಂಗ್ ಮುಂದಿನ ಒಂದು ದಶಕ ಪ್ರಧಾನಿಯಾಗಿ ಹಲವು ಸಾಧನೆಗಳನ್ನು ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭಾರತವಿ ಸ್ಥಿರವಾದ ಆರ್ಥಿಕ ಬೆಳವಣಿಗೆ ಕಂಡಿತು. ಇಂದು ಭಾರತ ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗುವತ್ತ ಮುನ್ನಡೆಯುತ್ತಿದ್ದು ಇದಕ್ಕೆ ಬುನಾದಿ ಹಾಕಿದ್ದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MGNREGA) ನಂತಹ ಪ್ರಮುಖ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಾಯಿತು.

ಯುಎಸ್ ಜೊತೆ ಪರಮಾಣು ಒಪ್ಪಂದ

2008 ರಲ್ಲಿ ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಭಾರತದ ಪರಮಾಣು ಪ್ರತ್ಯೇಕತೆಯನ್ನು ಕೊನೆಗೊಳಿಸಿದರು ಮತ್ತು ಸುಧಾರಿತ ಪರಮಾಣು ತಂತ್ರಜ್ಞಾನಕ್ಕೆ ಮುನ್ನುಡಿ ಬರೆದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ

ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (NRHM) ಮತ್ತು ಸರ್ವ ಶಿಕ್ಷಾ ಅಭಿಯಾನದಂತಹ ಕಾರ್ಯಕ್ರಮಗಳನ್ನು ಪರಿಚಯಿಸಲಾಯಿತು. ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಹೆಚ್ಚಿನ ಹೂಡಿಕೆಗೆ ಬೆಂಬಲ ನೀಡಿದರು.

ಆರ್ ಬಿಐ ಗವರ್ನರ್ ಆಗಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು, ರಾಜಕೀಯ ಜೀವನದಿಂದ ನಿವೃತ್ತಿಯಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದರು. ಪ್ರಧಾನಿಯಾಗಿದ್ದಾಗ ಹಲವು ಟೀಕೆಗಳನ್ನು ಕೂಡ ಎದುರಿಸಿದರು.

ಬರಹ ಮತ್ತು ಸಂಗ್ರಹ : ಮೊಹಮ್ಮದ್ ಶಫಿ ಸ್ಪೆಶಲ್ ಡೆಸ್ಕ್ tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button