ಅಮಿತ್ ಶಾ ಹೇಳಿಕೆ ವಿರೋಧಿಸಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅವ ಹೇಳನ ಹೇಳಿಕೆ ನೀಡಿರುವ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಚಾಮರಾಜನಗರದಲ್ಲಿ ಇಂದು ಕರ್ನಾಟಕ ರಾಜ್ಯ ಚಲವಾದಿ ಕ್ಷೀಮಾಭಿವೃದ್ಧಿ ಸಂಘ, ಗಡಿ ಕಟ್ಟೆ ಯಜಮಾನರುಗಳು, ವಿವಿಧ ಪ್ರಗತಿಪರ ದಲಿತ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಅವರು ಮಾತನಾಡಿ, ಈ ದೇಶದ ಸಂವಿಧಾನದ ಪಿತಾಮಹ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಲಘುವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ, ಸ್ವತಂತ್ರ ಪೂರ್ವದಲ್ಲಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುತ್ತಿದ್ದರು, ಅಲ್ಲದೆ ನರಕ ಯಾತನೆಯಲ್ಲಿದ್ದ ಜನರಿಗೆ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಮಾಡುವ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದರು. ಅಂತಹ ಮಹಾನ್ ವ್ಯಕ್ತಿ ವಿರುದ್ಧ ಅಪಮಾನ ಮಾಡಿರುವುದು ಸರಿ ಅಲ್ಲ ಎಂದು ಖಂಡಿಸಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ಭಾರತ ದಲ್ಲಿ ಅತ್ಯಂತ ಅಮೂಲ್ಯವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದವರು ಡಾ. ಬಿ.ಆರ್. ಅಂಬೇಡ್ಕರ್ ದೇಶದ ಜನರಿಗೆ ಅತ್ಯುತ್ತಮವಾದ ಸಂವಿಧಾನ ನೀಡುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ, ಆದರೆ ಆರ್ ಎಸ್ ಎಸ್ ಮತ್ತು ಬಿಜೆಪಿಯವರು ಸಂವಿಧಾನವನ್ನು ಒಪ್ಪಿಕೊಂಡಿಲ್ಲ, ಕೇವಲ ನಾಟಕ ಮಾಡುತ್ತಾ ದಲಿತರು ಮತ್ತು ಹಿಂದುಳಿದ ವರ್ಗದವರನ್ನು ತುಳಿಯುತ್ತಾ ಬಂದಿದ್ದಾರೆಂದು ಆರೋಪಿಸಿದರು. ಅಮಿತ್ ಶಾ ಅವರು ನೀಡಿರುವ ಹೇಳಿಕೆ ದೇಶದ ಜನರಿಗೆ ಅಪಮಾನ ಮಾಡಿದಂತಾಗಿದೆ ಹೀಗಾಗಿ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಶಾಸಕ ಎ. ಆರ್. ಕೃಷ್ಣಮೂರ್ತಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಜನಾಂಗದವರಿಗೆ ಮಾತ್ರ ಸಂವಿಧಾನ ಮೀಸಲು ನೀಡಿಲ್ಲ, ಎಲ್ಲಾ ವರ್ಗದವರಿಗೂ ಮೀಸಲಾತಿ ಕಲ್ಪಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ, ಅಂತಹ ಮಹಾನ್ ವ್ಯಕ್ತಿಯ ಕುರಿತು ಅಮಿತ್ ಶಾ ನೀಡಿರುವ ಹೇಳಿಕೆ ತೀವ್ರ ಖಂಡನೀಯ, ಅವರು ಒಬ್ಬ ಮೂರ್ಖ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಇಬ್ಬರು ರಾಜೀನಾಮೆ ನೀಡಬೇಕು ಅಲ್ಲದೆ ಅಮಿತ್ ಶಾ ಅವರನ್ನು ಗಡಿಪಾರು ಮಾಡಬೇಕು ಎಂದರು ಅಲ್ಲದೆ ಸಂವಿಧಾನ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸದೇ ಇಲ್ಲದಿದ್ದರೆ ಅಮಿತ್ ಶಾ ಅವರು ಗೃಹ ಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಆದ್ದರಿಂದ ಅವಹೇಳನ ವಾಗಿ ಮಾತನಾಡಿದ್ದಾರೆ ಆದ್ದರಿಂದ ಅವರು ಕ್ಷಮೆ ಕೋರದಿದ್ದಲ್ಲಿ ಹೋರಾಟ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಮಾಜದ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.