ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ : ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, : ರೈತರು ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ಲಾಭ ತರುವ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ರೈತ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ-2024’ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ರೈತನಾಯಕರಾದ ಪ್ರೊ. ನಂಜುಂಡಸ್ವಾಮಿ ಹಾಗೂ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು,ರೈತರಿಗೆ ಸಮಸ್ಯೆಗಳು ನಿರಂತರವಾಗಿದೆ.

ಇದನ್ನು ಮನಗಂಡಿರುವ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತರು ಬೆಳೆದ ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಸರ್ಕಾರ ರೈತರ ಪರವಾಗಿದ್ದು, ಈ ಬಗ್ಗೆ ತಜ್ಞರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲಿದೆ. ರೈತರು ಆಧುನಿಕ ಕೃಷಿ ಪದ್ದತಿಗೆ ಹೊಂದಿಕೊಳ್ಳಬೇಕು ಎಂದರು.
ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಲಾಭ ತರುವ ಬೆಳೆ ಬೆಳೆಯಲು ಮುಂದಾಗಬೇಕು. ರೈತರು ಸಾವಯವ ಕೃಷಿಗೆ ಆದ್ಯತೆ ನೀಡಿ ಸಿರಿಧಾನ್ಯಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಜೊತೆಗೆ ವಿವಿಧ ಬಗೆಯ ಸೊಪ್ಪು ಬೆಳೆಯಬೇಕು. ಸಿರಿಧಾನ್ಯಗಳು ಹಾಗೂ ಸೊಪ್ಪು ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯದೇ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸ್ವಾಮಿನಾಥನ್ ಸಮಿತಿ ವರದಿ ಜಾರಿಯಾಗಿದ್ದರೆ ರೈತರಿಗೆ ಸಾಕಷ್ಟು ಅನುಕೂಲವಾಗುವುದಿತ್ತು. ರೋಗನಿರೋಧಕ ಶಕ್ತಿ ವೃದ್ಧಿಸುವ ಸಿರಿಧಾನ್ಯಗಳ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ಸಿರಿಧಾನ್ಯಗಳು ಇಂದು ನ್ಯೂಟ್ರಿಷೀಯನ್, ಡಯಟ್ ಆಹಾರವಾಗಿ ಪರಿವರ್ತನೆ ಹೊಂದಿ ಮಾರುಕಟ್ಟೆಗೆ ಪ್ರವೇಶಿಸಿವೆ ಎಂದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಹಾಗೂ ಭಾಗ್ಯರಾಜ್ ಅವರು ಮಾತನಾಡಿದರು.ಇದೇ ವೇಳೆ ಸಿರಿಧಾನ್ಯ ಪಾಕ ಹಾಗೂ ಮರೆತುಹೋದ ಆಹಾರ, ತಿನಿಸುಗಳ ತಯಾರಿಕೆ ಸ್ಫರ್ಧೆಯಲ್ಲಿ ವಿಜೇತರಾದ ಮಹಿಳೆಯರನ್ನು ಮತ್ತು ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಶ್ರೇಷ್ಠ ರೈತ ಪ್ರಶಸ್ತಿ ವಿಜೇತರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಆರಂಭದಲ್ಲಿ ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಿಂದ ಅಲಂಕೃತಗೊಳಿಸಿದ್ದ ರಾಶಿ ಪೂಜೆ ನೆರವೇರಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬದ ಅಂಗವಾಗಿ ಜಿಲ್ಲಾಡಳಿತದ ಮುಂಭಾಗದಿಂದ ಭುವನೇಶ್ವರಿ ವೃತ್ತದ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಏರ್ಪಡಿಸಲಾಗಿದ್ದ ಸಿರಿಧಾನ್ಯ ನಡಿಗೆಗೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿ.ಪಂ. ಸಿ ಈ ಓ. ಮೋನಾ ರೋತ್, ಕೃಷಿ ಇಲಾಖೆ ಉಪನಿರ್ದೇಶಕ ಸುಷ್ಮಾ , ಕೃಷಿ ಇಲಾಖೆ ನಿರ್ದೇಶಕಿ ರೂಪ ಸೇರಿದಂತೆ ರೈತ ಮುಖಂಡರು ಇದ್ದರು.
ವರದಿ : ಇರಸವಾಡಿ ಸಿದ್ದಪ್ಪಾಜಿ, tv8newskannada ಚಾಮರಾಜನಗರ