ಸೋಮವಾರಪೇಟೆಗೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯ

ಚಾಮರಾಜನಗರ:ಏ.24: ಇಲ್ಲಿನ ನಗರಸಭಾ ವ್ಯಾಪ್ತಿಗೆ ಬರುವ ಒಂದನೇ ವಾರ್ಡಿನ ಸೋಮವಾರಪೇಟೆ ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದೆ ಜನರು ಹಲವು ವರ್ಷಗಳಿಂದ ಪರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ನಗರಸಭಾ ಮಾಜಿ ಸದಸ್ಯ ಮಹದೇವು ಒತ್ತಾಯಿಸಿದ್ದಾರೆ.
ಸೋಮವಾರಪೇಟೆ ಗ್ರಾಮದಲ್ಲಿ ಒಳಚರಂಡಿ ಯೋಜನೆ ಅಪೂರ್ಣಗೊಂಡಿದ್ದು, ಮ್ಯಾನ್ ಹೋಲ್ ನಲ್ಲಿ ತುಂಬಿದ ಕಲುಷಿತ ನೀರು ಮುಂದೆ ಸಾಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಹರಿದಾಡುತ್ತಿದೆ ಅಲ್ಲದೆ ಕೆಲವು ಬೀದಿಗಳಲ್ಲಿ ಕೆರೆಯಂತಾಗಿದ್ದು ಹಂದಿಗಳ ವಾಸಸ್ಥಾನವಾಗಿದೆ, ಇದಲ್ಲದೆ ಕುಡಿಯುವ ನೀರಿಗೆ ಜನರು ಯಾತನೆ ಪಡುತ್ತಿದ್ದಾರೆ. ಶಿಥಿಲಗೊಂಡ ಟ್ಯಾಂಕನ್ನು ಕೆಡವಿ ಎರಡು ವರ್ಷ ಕಳೆದರೂ ಹೊಸ ಟ್ಯಾಂಕ್ ನಿರ್ಮಾಣ ಮಾಡಿಲ್ಲ ಹೀಗಾಗಿ ಮುಖ್ಯ ಕೊಳವೆಯಿಂದ 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಹೀಗಾಗಿ ಜನರ ಬಳಕೆಗೆ ತೀವ್ರ ಸಮಸ್ಯೆ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಈ ಗ್ರಾಮದಲ್ಲಿ ಮುಖ್ಯ ರಸ್ತೆಗೆ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಬಾರಿ ಶಾಸಕರು, ಜಿಲ್ಲಾಧಿಕಾರಿಗಳು, ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಈ ಕೂಡಲೇ ಮುಖ್ಯಮಂತ್ರಿಗಳು ಭೇಟಿ ನೀಡುವ ವೇಳೆ ಇತ್ತ ಗಮನಹರಿಸಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವರದಿ : ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ