Amit Shah: ಮಲ್ಲಿಕಾರ್ಜುನ್ ಖರ್ಗೆ ಬೇಡಿಕೆಯಂತೆ ರಾಜೀನಾಮೆ ಕೊಡಲು ನಾನು ಸಿದ್ಧ: ಅಮಿತ್ ಶಾ ಸ್ಫೋಟಕ ಹೇಳಿಕೆ

ನವದೆಹಲಿ, ಡಿಸೆಂಬರ್ 19 : ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ಅಮಿತ್ ಶಾ ರಾಜ್ಯಸಭೆಯಲ್ಲಿ ಆಡಿದ ಮಾತನ್ನೇ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅಸ್ತ್ರವಾಗಿ ಹಿಡಿದುಕೊಂಡಿದೆ.
ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅಮಿತ್ ಶಾ ವಿರುದ್ಧ ಪ್ರತಿಪಕ್ಷಗಳು ಹೋರಾಟವನ್ನ ನಡೆಸಿದ್ದು, ಮಲ್ಲಿಕಾರ್ಜುನ್ ಖರ್ಗೆ ಅವರು ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಅಮಿತ್ ಶಾ ವಿರುದ್ಧ ಪ್ರತಿಭಟನೆ ಜೋರಾಗುತ್ತಿದ್ದಂತೆ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದ್ದಿಗೋಷ್ಠಿಯನ್ನ ನಡೆಸಿದ್ದು, ರಾಜೀನಾಮೆಗೆ ಸಿದ್ದ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಗೆ ನನ್ನ ರಾಜೀನಾಮೆ ಬೇಕೆಂದರೆ ನಾನು ಕೊಡುತ್ತೇನೆ ಎಂದು ಅಚ್ಚರಿಯ ಹೇಳಿಕೆ ಅಮಿತ್ ಶಾ ಅವರು ನೀಡಿದ್ದಾರೆ. ಇದೀಗ ಅಮಿತ್ ಶಾ ರಾಜೀನಾಮೆ ಕೊಡುತ್ತಾರ ಅನ್ನೋ ಚರ್ಚೆ ಜೋರಾಗಿದೆ
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ನನ್ನ ರಾಜೀನಾಮೆ ಬೇಕು ಎಂದರೆ ಕೊಡಲು ನಾನು ಸಿದ್ಧ. ಆದರೆ ನನ್ನ ರಾಜೀನಾಮೆಯಿಂದ ಕಾಂಗ್ರೆಸ್ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಾನು ರಾಜೀನಾಮೆ ನೀಡಿದರೂ ಅಂಬೇಡ್ಕರ್ ಹಾಗೂ ಸಂವಿಧಾನದ ಕುರಿತು ಕಾಂಗ್ರೆಸ್ ಪಕ್ಷದ ನಿಲವು ಬದಲಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಹಿಂದಿನಿಂದಲೂ ಹೇಳಿಕೆಗಳನ್ನು ತಿರುವುಚುವುದ, ಅಂಕಿ ಅಂಶಗಳನ್ನು ಮರೆಮಾಚುವುದು ಮಾಡುತ್ತಿದೆ. ನಾನು ರಾಜ್ಯಸಭೆಯಲ್ಲಿ ಮಾತನಾಡಿರುವುದು ರೆಕಾರ್ಡ ಇದೆ. ಇದರ ಸಂಪೂರ್ಣ ಭಾಷಣವನ್ನು ಕೇಳಿಸಿಕೊಳ್ಳಿ. ಮಾಧ್ಯಮಗಳು ನನ್ನ ಸಂಪೂರ್ಣ ಭಾಷಣವನ್ನು ಜನರ ಮುಂದೆ ತಲುಪಿಸಿ. ಕತ್ತರಿ ಹಾಕಿ ಬೇರೊಂದು ಅರ್ಥದಲ್ಲಿ ತೋರಿಸಬೇಡಿ ಎಂದು ಅಮಿತ್ ಶಾ ಮನವಿ ಮಾಡಿದ್ದರೆ.
ಕಾಂಗ್ರೆಸ್ ಯಾವತ್ತೂ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿ, ಮೀಸಲಾತಿ ವಿರೋಧಿಯಾಗಿದೆ. ಸಂವಿಧಾನವನ್ನು ತುರ್ತು ಪರಿಸ್ಥಿತಿಯಲ್ಲಿ ಬಡುಮೇಲು ಮಾಡಿರುವುದು ಎಲ್ಲರೂ ನೋಡಿದ್ದಾರೆ ಎಂದು ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸತ್ಯವನ್ನು ತಿರುಚುವ ಅಭ್ಯಾಸ ಕಾಂಗ್ರೆಸ್‌ಗೆ ಇದೆ. ಈ ಹಿಂದೆಯೂ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಗಳನ್ನೂ ತಿರುಚಿದ್ದಾರೆ. ನಾನು ಡಾ. ಅಂಬೇಡ್ಕರ್ ಅವರನ್ನು ಎಂದಿಗೂ ಅವಮಾನಿಸದ ಪಕ್ಷದಿಂದ ಬಂದಿದ್ದೇನೆ. ನನ್ನ ಸಂಪೂರ್ಣ ಹೇಳಿಕೆ ರಾಜ್ಯಸಭೆಯಲ್ಲಿ ದಾಖಲಾಗಿದೆ. ನಮ್ಮ ಕಾರ್ಯಕರ್ತರು ನನ್ನ ಹೇಳಿಕೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಕಾಂಗ್ರೆಸ್ ಯಾವತ್ತೂ ಸುಳ್ಳುಗಳನ್ನೇ ಹೇಳಿ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತದೆ. ಇದೀಗ ಅಂಬೇಡ್ಕರ್ ಕುರಿತು ನನ್ನ ಹೇಳಿಕೆಯನ್ನು ತದ್ವಿರುದ್ಧವಾಗಿ ಪ್ರಚಾರ ಮಾಡುತ್ತಿದೆ. ಅಂಬೇಡ್ಕರ್‌ಗೆ ಅವಮಾನ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಇದೀಗ ಸುಳ್ಳು ಅಸ್ತ್ರವನ್ನು ಹಿಡಿದು ತಮ್ಮ ನಿಲುವು, ಮಾಡಿರುವ ಕೃತ್ಯಗಳನ್ನು ಮರೆ ಮಾಚಲು ಮುಂದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಸಭೆಯಲ್ಲಿ ಅಮಿತ್ ಶಾ ತಮ್ಮ ಭಾಷಣದ ವೇಳೆ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿ ಫ್ಯಾಶನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದರೆ ಏಳು ಜನ್ಮಗಳ ವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಆದರೆ ಕಾಂಗ್ರೆಸ್ ನಿಮ್ಮ ಅಂಬೇಡ್ಕರ್ ಅಸಲಿಯತ್ತು ನಾನು ಬಿಡಿಸಿ ಹೇಳುತ್ತೇನೆ ಎಂದು ಅಮಿತ್ ಶಾ ಹೇಳಿದರು.