ನಿಮಗೆ ಹೆಂಡತಿ, ತಾಯಿ ಮಗಳು ಇಲ್ವಾ? ಸದನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ct ರವಿ ವಿರುದ್ಧ ಕೆಂಡಾಮಂಡಲ

ಬೆಳಗಾವಿ : ಸುವರ್ಣ ಸೌಧ ವಿಧಾನ ಪರಿಷತ್ ಕಲಾಪದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಕೆ ಮಾಡಿದ್ದಾರೆಂಬ ಆರೋಪವು ಕೋಲಾಹಲವನ್ನೇ ಎಬ್ಬಿಸಿದೆ.
ಕಲಾಪವು ವಿರಾಮದ ನಂತರ ಆರಂಭವಾಗುತ್ತಿದ್ದಂತೆ ಆಡಳಿತ ರೂಢ ಪಕ್ಷದ ಸದಸ್ಯರು ಸಿಟಿ ರವಿ ವಿರುದ್ಧ ಸಭಾಂಗಣದಲ್ಲಿ ಮುಗಿಬಿದ್ದರು.
ಭಾರತ್ ಮಾತಾಕಿ ಜೈ ಎನ್ನುವ ನೈತಿಕತೆ ನಿಮಗಿಲ್ಲ. ನಿಮಗೆ ಹೆಂಡತಿ, ತಾಯಿ ಮಗಳು ಇಲ್ವೇನ್ರೀ ಎಂದು ಸಿಟಿ ರವಿ, ಬಿಜೆಪಿ ಸದಸ್ಯರ ವಿರುದ್ಧ ಹೆಬ್ಬಾಳ್ಕರ್ ಗುಡುಗಿದರು. ಆಡಳಿತ ಪಕ್ಷದ ಹಾಗೂ ವಿಪಕ್ಷ ನಾಯಕರ ಗದ್ದಲ, ವಾಕ್ಸಮರ ಕಾವು ಮತ್ತೆ ತೀವ್ರಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
ಇದಕ್ಕೂ ಮುನ್ನ ಆಡಳಿತರೂಢ ಸದಸ್ಯರು ರವಿ ಅವರು ಕೆಟ್ಟ ಪದಬಳಕೆ ಮಾಡಿದ್ದಾರೆಂದು ಹಾಗೂ ವಿರೋಧ ಪಕ್ಷದ ಸದಸ್ಯರು ಇಲ್ಲ, ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಎರಡೂ ಪಕ್ಷದ ಸದಸ್ಯರಿಂದ ಆರೋಪ-ಪ್ರತ್ಯಾರೋಪ ದೂರುಗಳು ಬಂದಿವೆ. ಘಟನೆ ಬಗ್ಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಭಾಪತಿಗಳು ಸಲಹೆ ನೀಡಿದರು. ಇನ್ನು ಪೊಲೀಸ್ ಭದ್ರತೆಯಲ್ಲಿ ಸಿ.ಟಿ.ರವಿ ಅವರು ಸದನದಿಂದ ಇದೇ ವೇಳೆ ಹೊರ ನಡೆದರು.