ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಪ್ರತಿಭಟನೆ

ಚಾಮರಾಜನಗರ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಮಿತಿಯಿಂದ ಇಂದು ಪ್ರತಿಭಟನೆ ನಡೆಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟು ಅಲ್ಲಿಂದ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಮೆರವಣಿಗೆಯ ಮೂಲಕ ತೆರಳಿದರು. ನಂತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ಕಾಯಂ ಮಾಡುವುದು, ಗ್ರ್ಯಾಚುಟಿ ಹಣ ಬಿಡುಗಡೆ, 26 ಸಾವಿರ ರೂಗಳಿಗೆ ಗೌರವಧನ ಹೆಚ್ಚಿಸುವುದು, ನಿವೃತ್ತಿಯಾದವರಿಗೆ 10 ಸಾವಿರ ಮಾಸಿಕ ಪಿಂಚಣಿ ನೀಡುವುದು, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಲ್ಲೇ ಎಲ್ಕೆಜಿ,ಯುಕೆಜಿ ಪ್ರಾರಂಭಿಸುವುದು, ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಮಾಡುವುದು,ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸುವುದು, ಸಚಿವರ ಒಪ್ಪಿಗೆಯಂತೆ ಆರೋಗ್ಯ ವಿಮೆ ಜಾರಿಗೊಳಿಸುವುದು, ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್ಟಿ ಹಾಕಬಾರದು, ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು, ಅಧಿಕಾವಧಿ ವೇತನ ನೀಡುವುದು, ದಾಖಲಾತಿ ಬರೆಸುವ ಸಂಖ್ಯೆ ಕಡಿಮೆ ಮಾಡುವುದು, ಪೋಷನ್ ಟ್ರ್ಯಾಕರ್ ನಲ್ಲಿರುವ ಅಪಾಯದ ಅಂಶ ಕೈ ಬಿಡಬೇಕು, ಐಸಿಬಿಎಸ್ ಯೋಜನೆ ಕಾಯ್ದೆ ರೂಪಿಸಬೇಕು ಸೇರಿದಂತೆ ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಖಜಾಂಚಿ ಜಿ.ಭಾಗ್ಯ, ಚಾಮರಾಜನಗರ ತಾಲೂಕು ಕಾರ್ಯದರ್ಶಿ ಶಾಯಿದಭಾನು, ಖಜಾಂಚಿ ಗುರುಲಿಂಗಮ್ಮ, ಸಂತೇಮರಹಳ್ಳಿ ಅಧ್ಯಕ್ಷೆ ಪಾರ್ವತಮ್ಮ, ಖಜಾಂಚಿ ಜಯಮಾಲಾ, ಕಾರ್ಯದರ್ಶಿ ತುಳಸಮ್ಮ, ಯಳಂದೂರು ತಾಲೂಕು ಅಧ್ಯಕ್ಷಿ ಮೀನಾಕ್ಷಿ, ಖಜಾಂಚಿ ಕೆಂಪಮ್ಮ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷೆ ಸುಜಿಯಾ, ಖಜಾಂಚಿ ಸುಮಿತ್ರ ಕಾರ್ಯದರ್ಶಿ ಗುರುಮಲ್ಲಮ್ಮ, ಕೊಳ್ಳೇಗಾಲ ತಾಲೂಕು ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಸುಂದರಮ್ಮ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ವರದಿ : ಇರಸವಾಡಿ ಸಿದ್ದಪ್ಪಾಜಿ, tv8newskannada, ಚಾಮರಾಜನಗರ