ಮಾದರಿಯತ್ತ ಬಿ.ಸಿ.ಎಂ ಬಾಲಕಿಯರ ವಿದ್ಯಾರ್ಥಿ ನಿಲಯ : ತಾಲೂಕು ಕಲ್ಯಾಣಾಧಿಕಾರಿ ಲಿಂಗರಾಜು

ಚಾಮರಾಜನಗರ.ಡಿ.14 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಮಾದರಿಯತ್ತ ಸಾಗುತ್ತಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು ತಿಳಿಸಿದರು.
ತಾಲೂಕಿನ ಬೇಡರಪುರ ಗ್ರಾಮದಲ್ಲಿರುವ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ 2024-25 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಗೆ ಕೆ. ಶ್ರೀನಿವಾಸ್ ಅವರು ಆಯುಕ್ತರಾಗಿ ಬಂದ ಬಳಿಕ ವಿದ್ಯಾರ್ಥಿ ನಿಲಯಗಳು ಅಮೂಲಗ್ರವಾಗಿ ಬದಲಾವಣೆ ಹೊಂದುತ್ತಿದೆ. ಮೂಲಭೂತ ಸೌಕರ್ಯ ಸೇರಿದಂತೆ ಹಾಸ್ಟೆಲ್ ಗೆ ಸಿ.ಸಿ. ಕ್ಯಾಮೆರಾ ಅಳವಡಿಕೆ, ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ, ಹಿಂದೆ ಇದ್ದ ಬಹುತೇಕ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗಿದೆ, ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಅವರು ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಪೋಷಕರು ಹಾಗೂ ಶಾಲೆಗೆ ಕೀರ್ತಿ ತರಬೇಕು ಅಲ್ಲದೆ ಉತ್ತಮ ಫಲಿತಾಂಶ ಕೊಡುವಂತಹ ಮಕ್ಕಳಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ ಅಲ್ಲದೆ ನಾನು ಸಹ ವೈಯಕ್ತಿಕ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭಾ ಮಾಜಿ ಸದಸ್ಯ ಹೆಚ್.ಎಸ್. ಚಂದ್ರಶೇಖರ್ ಅವರು ಮಾತನಾಡಿ, ಈ ಹಿಂದೆ ಕನ್ನಡ ಶಾಲೆಗಳು ಮಾತ್ರ ಇದ್ದವು ಆದರೆ ಈಗ ಸರ್ಕಾರಗಳು ಆಂಗ್ಲ ಭಾಷೆಗಳ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಇದರ ಸದುಪಯೋಗ ಮಾಡಿಕೊಂಡು ವಿದ್ಯಾವಂತರಾಗಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ದೇವರಾಜು ಅರಸು ಅವರು ಈ ಇಲಾಖೆಗೆ ಉತ್ತಮ ಕೊಡುಗೆ ನೀಡಿದ್ದಾರೆ ಅವರ ಆದರ್ಶಗಳ ಪಾಲನೆ ಮಾಡಬೇಕು ಅಲ್ಲದೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಾದ ತೇಜು ಮತ್ತು ವಿಜಯಲಕ್ಷ್ಮಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತ ಇರಸವಾಡಿ ಸಿದ್ದಪ್ಪಾಜಿ.ಪಿ, ನಿಲಯ ಪಾಲಕರಾದ ಭಾಗ್ಯಲಕ್ಷ್ಮಿ, ಚಿನ್ನಸ್ವಾಮಿ, ಲಿಂಗಣ್ಣ, ಸುನಿತಾ, ನಿಲಯ ಮೇಲ್ವಿಚಾರಕರಾದ ರೇಖಾ, ಶಿಲ್ಪ ಶ್ರೀ, ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರಾದ ಲೋಕೇಶ್, ಸಿ.ಎಚ್. ಶ್ರೀನಿವಾಸ್, ಡಾ.ಪ್ರಸಾದ್, ಲೋಕೇಶ್ ,ಶ್ರೀಧರ್, ಮಲ್ಲಿಕಾರ್ಜುನ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.