ಬಿಜೆಪಿ ತೆಕ್ಕೆಗೆ ದೇವನೂರು ಗ್ರಾಪಂ ಅಧ್ಯಕ್ಷ ಸ್ಥಾನ; ದೇವನೂರು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅವಿನಾಶ್ ಅವಿರೋಧ ಆಯ್ಕೆ

ನಂಜನಗೂಡು: ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನೂರು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅವಿನಾಶ್ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಬಾರಿಯೂ ದೇವನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ ಬಂದಿದೆ.
ದೇವನೂರು ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.
ಹಿಂದಿನ ಅಧ್ಯಕ್ಷ ಮಂಜು ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ದೇವನೂರು ಗ್ರಾಮದ ಅವಿನಾಶ್ ಒಬ್ಬರೆ ನಾಮ ಪತ್ರವನ್ನು ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಚುನಾವಣಾ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಮಂಜುಳಾ ರವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ನೂತನ ಅಧ್ಯಕ್ಷರಾಗಿ ಅವಿನಾಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ, ಅಧಿಕಾರ ವಹಿಸಿಕೊಟ್ಟರು. 19 ಸದಸ್ಯರ ಬಲ ಹೊಂದಿರುವ ದೇವನೂರು ಗ್ರಾಮ ಪಂಚಾಯಿತಿಯೂ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 14 ಸದಸ್ಯರು ಹಾಜರಿದ್ದು, 5 ಸದಸ್ಯರು ಗೈರಾಗಿದ್ದರು.
ನೂತನ ಅಧ್ಯಕ್ಷ ಅವಿನಾಶ್ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ. ಸಮಗ್ರ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಪಣ ತೊಟ್ಟು, ಶುದ್ಧ ಕುಡಿಯುವ ನೀರು ರಸ್ತೆ ಶೌಚಾಲಯ ಸೇರಿದಂತೆ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ನಾಗೇಂದ್ರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಮೂರ್ತಿ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಜಿ.ಪಂ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗನಾಯಕ, ಮಾಜಿ ತಾಪಂ ಉಪಾಧ್ಯಕ್ಷ ಸಿಎಂ ಮಹದೇವಯ್ಯ, ಮಾಜಿ ಗ್ರಾಪಂ ಅಧ್ಯಕ್ಷ ಮಂಜು, ನಿವೃತ್ತ ಶಿಕ್ಷಕ ಚನ್ನಬಸಪ್ಪ, ಕೋಣನೂರು ಗ್ರಾಪಂ ಅಧ್ಯಕ್ಷ ವಸಂತಕುಮಾರ್, ಗ್ರಾಪಂ ಸದಸ್ಯರಾದ ರವಿಕುಮಾರ್, ಮಂಜುಳಾ ರಾಜಪ್ಪ, ಡಿ.ಎಂ ಮಹದೇವ್, ಪದ್ಮ, ಸೌಮ್ಯ ನಾಗೇಂದ್ರ, ಮಂಜುಳಾ ಶೇಖರ್, ರತ್ನಮ್ಮ, ಹನುಮಂತ ನಾಯಕ, ಮಂಜುಳಾ, ಡಿ.ಎಂ ರವಿ ಮುಖಂಡರಾದ ಪುಟ್ಟಪ್ಪ, ವರಹಳ್ಳಿ ನಾಗೇಂದ್ರ, ಚಂದ್ರು, ರಾಜಪ್ಪ, ಶಾಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ : ಸಿಎಂ ಸುಗಂಧರಾಜ tv8newskannada ಮೈಸೂರು