ಇತ್ತೀಚಿನ ಸುದ್ದಿ

ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಹೆಜ್ಜೆ : ಕಂದಾಯ ಸಚಿವ ಕೃಷ್ಣ ಬೈರೇಗೌಡ

ಚಾಮರಾಜನಗರ:– ನೂತನ ತಂತ್ರಜ್ಞಾನದಡಿ ಸಾಗುವಳಿ ಚೀಟಿ, ಪಹಣಿ ಪತ್ರ, ಪೋಡಿ ದಾಖಲೆ,ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಸ್ಥಾನ ಹೊಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಗುಂಡ್ಲುಪೇಟೆಯ ಶಿಕ್ಷಕರ ಭವನದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಗರ್ ಹುಕುಂ ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಪೋಡಿ ದಾಖಲೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಳುವವನೇ ಭೂಮಿ ಒಡೆಯ, ಭೂ ಸುಧಾರಣೆ ಯೋಜನೆ ಸೇರಿದಂತೆ ಹಲವು ವಿಷಯಗಳಡಿ 30-40 ವರ್ಷಗಳ ಹಿಂದೆ ಹಲವರಿಗೆ ಭೂಮಿ ಮಂಜೂರಾಗಿದೆ.

ಇಂತಹ ಜಮೀನುಗಳು ಇದುವರೆಗೂ ದುರಸ್ತಿಯಾಗಿಲ್ಲ. ರೈತರು ಸಾಗುವಳಿ ಮಾಡುತ್ತಿದ್ದರೂ ಜಮೀನು ಸರ್ಕಾರಿ ಹೆಸರಿನಲ್ಲಿರುತ್ತದೆ. ಜಮೀನಿನ ಮೇಲೆ ಸಂಪೂರ್ಣ ಹಕ್ಕು, ಮಾಲೀಕತ್ವ ರೈತರಿಗೆ ಇಲ್ಲವಾಗಿದೆ. ಜಮೀನು ದುರಸ್ತಿಯಾಗದಿದ್ದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ.

ದುರಸ್ತಿ ಸಂಬಂಧ ರೈತರು ಅವಶ್ಯ ದಾಖಲೆಗಳನ್ನು ಒದಗಿಸುವುದು ಸಾಧ್ಯವಾಗದಿರಬಹುದು. ಇದರಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಸಾಗುವಳಿ ಚೀಟಿ, ಪಹಣಿ ಪತ್ರಿಕೆ, ಪೋಡಿ ದಾಖಲೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರಗಳನ್ನು ನೂತನ ತಂತ್ರಜ್ಞಾನದಡಿ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಮಹತ್ತರ ಕಾರ್ಯವನ್ನು ರಾಜ್ಯಾದ್ಯಂತ ಆರಂಭಿಸಿದೆ. ಜನಪರ ಕೆಲಸಗಳಿಂದ ಜನರಿಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ. ಹಿಂದೆ ಸಾಗುವಳಿ ಮಾಡದಿರುವವರು, ಇತರರು ಬಗರ್ ಹುಕುಂ ಅಡಿಯಲ್ಲಿ ಜಮೀನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. ಇದಕ್ಕಾಗಿ ಸರ್ಕಾರ ನೂತನ ತಂತ್ರಜ್ಞಾನ ಸಿದ್ದಪಡಿಸಿದ್ದು, ಎಲ್ಲವೂ ಅನ್‍ಲೈನ್‍ನಲ್ಲಿ ನಮೂದಾಗುವುದರಿಂದ ದಾಖಲೆಗಳು ಕಳೆದುಹೋಗುವ ಸಂಭವವಿರದೇ ಶಾಶ್ವತವಾಗಿ ಸಾಕಷ್ಟು ವರ್ಷಗಳವರೆಗೆ ಇರಲಿದೆ. ಅಲ್ಲದೆ ಯಾವುದೇ ನಕಲಿ ದಾಖಲೆಗೆ, ನಕಲಿ ತಿದ್ದುಪಡಿಗೆ ಅವಕಾಶವಿಲ್ಲದಂತಾಗಿದೆ.

ಇದರಿಂದ ರೈತರು ನೆಮ್ಮದಿ ಜೀವನ ನಡೆಸುವಂತಾಗಲಿದೆ. ಪ್ರಸ್ತುತ ಬಗರ್ ಹುಕುಂ ಅಡಿ ಜಮೀನು ಸಕ್ರಮಗೊಳಿಸಲು ರಾಜ್ಯಾದ್ಯಂತ 1 ಲಕ್ಷದ 58 ಸಾವಿರ ಅರ್ಜಿಗಳು ಬಂದಿವೆ. ಸಕ್ರಮಿಕರಣಗೊಳಿಸಲು ಯಾರು ಅರ್ಜಿ ಹಾಕಿದ್ದಾರೋ ಅವರಿಗೆ ಅವಶ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಅರ್ಹರಿಗೆ ನಿಯಾಮಾನುಸಾರ ಮಂಜೂರು ಮಾಡಲಾಗುತ್ತದೆ. ಕೆಲವೆಡೆ ಗ್ರಾಮ, ತಾಂಡಾ, ಕ್ಯಾಂಪ್‍ಗಳಿದ್ದು, ಸುಮಾರು ವರ್ಷಗಳಿಂದ ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿರುವುದಿಲ್ಲ. ಇದರಿಂದ ಜನವಸತಿ ಸೌಲಭ್ಯಗಳನ್ನು ಒದಗಿಸಲು ತೊಂದರೆಯಾಗುತ್ತಿದೆ. ಇದನ್ನು ಪರಿಹರಿಸಲು ಸರ್ಕಾರ ಮುಂದಾಗಿದ್ದು, ಜಮೀನಿನ ನಕ್ಷೆ, ಆಕಾರ್ ಬಂದ್, ಹೊಸ ಸರ್ವೇ ನಂಬರ್ ಹಾಗೂ ಪ್ರತ್ಯೇಕ ಆರ್.ಟಿ.ಸಿ ಯೊಂದಿಗೆ ಸಾಗುವಳಿ ಚೀಟಿಯನ್ನು ಸರ್ಕಾರದ ವತಿಯಿಂದಲೇ ನೊಂದಣಿ ಮಾಡಿಸಿ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸಲಾಗುತ್ತಿದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ 68 ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಗುರುತಿಸಲಾಗಿದ್ದು, ಡಿಜಿಟಲೀಕರಣಗೊಂಡಿರುವ ಕಂದಾಯ ಗ್ರಾಮಗಳ 10 ಹಕ್ಕುಪತ್ರಗಳನ್ನು ಸಾಂಕೇತಿಕವಾಗಿ ಇಂದು ವಿತರಿಸಲಾಗುತ್ತಿದೆ. ಮುಂದಿನ 4 ತಿಂಗಳೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ರೈತರೆಲ್ಲರಿಗೂ ಸಾಗುವಳಿ ಚೀಟಿ ವಿತರಿಸುವ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಎಂ ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಪುರಸಭಾ ಅಧ್ಯಕ್ಷ ಜಿ.ಎಸ್. ಕಿರಣ್, ಉಪಾಧ್ಯಕ್ಷ ಹೀನಾ ಕೌಸರ್, ಜಿಲ್ಲಾಧಿಕಾರಿ ಶಿಲ್ಪನಾಗ್, ಎಸಿ.ಮಹೇಶ್, ತಹಶೀಲ್ದಾರರು ಸೇರಿದಂತೆ ಇತರರು ಹಾಜರಿದ್ದರು.

ವರದಿ: ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button