ಡಾ.ಬಿ.ಆರ್. ಅಂಬೇಡ್ಕರ್ ರ 68ನೇ ಪರಿನಿರ್ವಾಣ ದಿನಾಚರಣೆದಲಿತರಿಗಾಗಿ ಮೀಸಲಿಟ್ಟ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ: ರಮೇಶ ವೀರಾಪೂರು

ಹಟ್ಟಿ ಚಿನ್ನದ ಗಣಿ : ದಲಿತ ಹಕ್ಕುಗಳ ಸಮಿತಿ, ಎಸ್ಎಫ್ಐ, ಡಿವೈಎಫ್ಐ ಸಿಐಟಿಯು ಜಂಟಿ ಸಂಘಟನೆಗಳಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 68ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂವಿಧಾನ ಉಳಿಯಲಿ ಮನುವಾದ ಅಳಿಯಲಿ ಎಂದು ಘೋಷಣೆ ಹಾಕಲಾಯಿತು.

ಎಸ್ಎಫ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ದಲಿತರನ್ನು ಮುಖ್ಯವಾಹಿನಿಗೆ ತರಲು, ಶೋಷಣೆಯಿಂದ ವಿಮೋಚನೆಗೊಳಿಸಲು ಇನ್ನಷ್ಟು ಹೋರಾಟಗಳು ತೀವ್ರಗೊಳಿಸಬೇಕು. ಕೇಂದ್ರ ಸರಕಾರ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುವ ಪರಿಶಿಷ್ಟರ ವಿಶೇಷ ಘಟಕ ಯೋಜನೆಗಳ ಕಾಯಿದೆ ಜಾರಿಗೊಳಿಸುವಂತೆ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ತಿದ್ದುಪಡಿ ಮಸೂದೆ ಅಂಗೀಕರಿಸಲು ಒತ್ತಾಯಿಸಬೇಕು ಎಂದರು.
ಕಳೆದ 2 ಸಾವಿರ ವರ್ಷಗಳಿಂದ ದಲಿತರು ಭೂಮಿಯ ಮೇಲಿನ ಹಕ್ಕನ್ನು ಹೊಂದದೇ ವ್ಯವಸಾಯ ಮಾಡಲಾಗದೇ, ಜಮೀನುದಾರರು, ಭೂಮಾಲೀಕರ ಜಮೀನುಗಳಲ್ಲಿ ಕೂಲಿಗಳಾಗಿಯೇ ಜೀವನ ನಡೆಸುವಂತಾಗಿದೆ. ದಲಿತರ ಏಳಿಗೆಗಾಗಿ ಸರಕಾರಗಳು ಅನುದಾನ ಮೀಸಲಿಟ್ಟಿದ್ದರೂ, ಸಮರ್ಪಕ ಬಳಕೆಯಾಗುತ್ತಿಲ್ಲ. ಸಮಾಜದಲ್ಲಿ ದಲಿತ ಮಹಿಳೆಯರಿಗೆ, ವಿಮುಕ್ತ ದೇವದಾಸಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಯುವಜನರಿಗೆ ಯಾವುದೇ ಕಾರ್ಯಕ್ರಮಗಳು ತಲುಪುತ್ತಿಲ್ಲ ಎಂದು ಆಳುವ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಹಕ್ಕುಗಳ ಸಮಿತಿಯ ತಾಲೂಕು ಮುಖಂಡ ನಿಂಗಪ್ಪ ಎಂ. ವೀರಾಪೂರು ಮಾತನಾಡಿ, ಪ್ರತಿ 3 ತಾಸಿಗೆ ಒಬ್ಬ ದಲಿತರ ಹತ್ಯೆಯಾಗುತ್ತಿದ್ದರೆ, ಪ್ರತಿ ಎರಡೂವರೆ ತಾಸಿನಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ. ದಲಿತರ ಆಹಾರ ಹಕ್ಕನ್ನು ಕಸಿಯಲಾಗುತ್ತಿದೆ. ಆಳುವ ಸರಕಾರಗಳ ತುಳಿತಕ್ಕೆ ಒಳಗಾದ ದಲಿತರಿಗೆ ಭೂಮಿಯ ಹಕ್ಕು, ಶೈಕ್ಷ ಣಿಕ ಹಕ್ಕು ನೀಡಬೇಕು. ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗಾಗಿ ನೀಡಿರುವ ಎಲ್ಲ ಹಕ್ಕುಗಳ ಸಮರ್ಪಕ ಜಾರಿಯಾಗಬೇಕು. ಗ್ರಾಮೀಣ ಭಾಗದ ದಲಿತರ ಕಾಲೊನಿಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು, ರಸ್ತೆ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿಐಟಿಯು ಮುಖಂಡ ಮೈನುದ್ದೀನ್ ಟೈಲರ್, ಮುಖಂಡರಾದ ಹನೀಫ್, ದಾವೂದ್, ಅಲ್ಲಾಭಕ್ಷ ದೇವಪೂರ್, ಚೆನ್ನಬಸವ ಅಂಬೇಡ್ಕರ್ ನಗರ, ಹಾಜಿಬಾಬು ಕಟ್ಟಿಮನಿ, ಲಾಲ್ ಸಾಬ್, ರಿಯಾಜ್ ಖುರೇಶಿ, ಮಹಿಬೂಬ್ ಖುರೇಷಿ, ಮಹ್ಮದ್, ಮಯ್ಯಾ, ಪಯಾಜ್, ನಾಗರಾಜ್, ನಜೀರ್, ದಾದಾ ಬ್ಯಾಂಕ್, ದೌಲತ್, ಶಿವಪುತ್ರ ಹೊಸಮನಿ, ಖಾಜಾ ಹುಸೇನ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಮುಸ್ತಾಫಾ tv8newskannada ಲಿಂಗಸುಗೂರು