ಇತ್ತೀಚಿನ ಸುದ್ದಿ

‘ಭಾಗ್ಯಲಕ್ಷ್ಮಿ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಖಾತೆಗೆ ಹಣ ಜಮಾ

ಬೆಂಗಳೂರು: ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ರವಾನೆಯಾಗತೊಡಗಿದೆ. 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ಮಾಡಿಸಿದ್ದ 2.30 ಲಕ್ಷ ಹೆಣ್ಣು ಮಕ್ಕಳ ಬಾಂಡ್ 18 ವರ್ಷ ಪೂರ್ಣಗೊಳಿಸಿದೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮೂಲಕ ಕಳುಹಿಸುತ್ತಿದ್ದು, ಈಗಾಗಲೇ ಶೇಕಡ 10 ರಷ್ಟು ಮಂದಿಗೆ ಹಣ ರವಾನೆ ಮಾಡಲಾಗಿದೆ.

ಹಂತಹಂತವಾಗಿ ಉಳಿದವರಿಗೂ ಹಣ ರವಾನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸುವ ನಿಟ್ಟಿನಲ್ಲಿ 2006 -07ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು.

2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಮಾಡಿಸಿದ್ದ ಹೆಣ್ಣು ಮಗುವಿನ ಬಾಂಡ್ ಈಗ 18 ವರ್ಷ ತುಂಬಿದ್ದು,, ಮೆಚ್ಯೂರಿಟಿ ಅವಧಿ ಪೂರ್ಣವಾದ ಫಲಾನುಭವಿಗಳಿಗೆ ಹಣ ನೀಡಲಾಗುತ್ತದೆ. ನೋಂದಣಿ ಮಾಡಿಸಿಕೊಂಡಿದ್ದ ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್‌ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. ಈಗಾಗಲೇ ಇಲಾಖೆಯಿಂದ ಎಲ್ಲಾ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಹಣ ರವಾನಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಗನವಾಡಿ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಭೇಟಿ ಮಾಡಬಹುದು.

ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ವಿಲೀನ ಮಾಡಲಾಗಿದೆ. ಬಿಪಿಎಲ್ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು ಜಾರಿಗೆ ತರಲಾಗಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು 2020- 21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗಿದೆ. ಇದನ್ನು ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button