ರಾಜ್ಯಸುದ್ದಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿಅವರನ್ನು ಸನ್ಮಾನಿಸಿದ ಸ್ಮಶಾನ ಕಾರ್ಮಿಕರು

ನನ್ನ ಅವಧಿಯಲ್ಲಿ ಸ್ಮಶಾನ ಕಾರ್ಮಿಕರನ್ನು ಕಾಯಂಗೊಳಿಸಿದ್ದು ನೆಮ್ಮದಿ ತಂದ ತೀರ್ಮಾನ: ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಮಶಾನ ಕಾರ್ಮಿಕರು ಹಾಗೂ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಆದೇಶ ಮಾಡಿರುವುದು ನೆಮ್ಮದಿ ತಂದ ತೀರ್ಮಾನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ಸ್ಮಶಾನ ಕಾರ್ಮಿಕರನ್ನು ಕಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿ ಆದೇಶ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಡಾ. ಬಿ.ಆರ್. ಅಂಬೇಡ್ಕರ್ ರುದ್ರಭೂಮಿ ಹಾಗೂ ವಿದ್ಯುತ್ ಚಿತಾಗಾರ ನೌಕರರ ಸಂಘದವರು ಆರ್. ಟಿ. ನಗರದ ತಮ್ಮ ನಿವಾಸದಲ್ಲಿ ಮಾಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಪ್ರಗತಿ ಪರ ತೀರ್ಮಾನಗಳನ್ನು ಮಾಡಿದ್ದೇನೆ. ಕಟ್ಟೆ ನಿರ್ಮಾಣ, ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ, ರಾಜ್ಯ ಕಟ್ಟುವಲ್ಲಿ ಹಲವಾರು ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ಅದರಲ್ಲಿ ನನಗೆ ಎರಡು ಮೂರು ನಿರ್ಣಯಗಳು ಅತ್ಯಂತ ಪ್ರೀಯವಾದ, ಮನಸಿಗೆ ನೆಮ್ಮದಿ ತರುವ ನಿರ್ಣಯಗಳು.
ಸ್ಮಶಾನ ಹಾಗೂ ಚಿತಾಗಾರದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹಿಂದಿನ ಯಾವುದೇ ಸರ್ಕಾರಗಳು ಗುರುತಿಸಿರಲಿಲ್ಲ, ಅವರು ಇದ್ದಾರೆ ಎನ್ನುವುದನ್ನೂ ಯಾರೂ ಗಮನಿಸಿರಲಿಲ್ಲ. ಸ್ಮಶಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಸ್ಮಶಾನಕ್ಕೆ ಬರುವ ಶವಗಳ ಬಂಧುಗಳ ಜೊತೆ ಅವರ ಬಂಧುಗಳಾಗಿ ಅಂತ್ಯ ಸಂಸ್ಕಾರ ಮಾಡುವ ದೊಡ್ಡ ಕೆಲಸ ಮಾಡುತ್ತಿದ್ದಾರೆ. ಇವರು ಒಂದು ರೀತಿಯಲ್ಲಿ ರಾಜಾ ಸತ್ಯ ಹರಿಶ್ಚಂದ್ರರ ವಂಶಾವಳಿ ಎಂದು ಹೇಳಿದರು.
ಬಿಬಿಎಂಪಿ ಸೇರಿದಂತೆ ಇತರ ಮಹಾನಗರಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇವರನ್ನು ಕಾಯಂಗೊಳಿಸಲು ತೀರ್ಮಾನ ಮಾಡಿದ್ದು, ಇಂದು ಫಲಪ್ರದವಾಗಿದ್ದು, ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಂಬಳ ದೊತೆಯುವ ವ್ಯವಸ್ಥೆಯಾಗಿದೆ. ಇದರಿಂದ ಸ್ಮಶಾನ ಕಾರ್ಮಿಕರೂ ಸಂತೋಷವಾಗಿದ್ದು, ನನಗೂ ಅವರಿಗಿಂತ ಹೆಚ್ಚು ಸಂತಸವಾಗಿದೆ ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಸುಮಾರು 43 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ತೀರ್ಮಾನ ತೆಗೆದುಕೊಂಡು, ನಮ್ಮ ಅವಧಿಯಲ್ಲಿ ಸುಮಾರು 13 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿತ್ತು. ಅವರ ಐವತ್ತು ಅರವತ್ತು ವರ್ಷದ ಬೇಡಿಕೆಯನ್ನು ಈಡೇರಿಸಲಾಗಿದ್ದು, ಇದು ನನ್ನ ಮನಸ್ಸಿಗೆ ಅತ್ಯಂತ ಸಮಾಧಾನ, ನೆಮ್ಮದಿ ಹಾಗೂ ಸಾರ್ಥಕತೆಯನ್ನು ತಂದುಕೊಟ್ಟ ನಿರ್ಣಯ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಮಶಾನ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಸೌರಿ ರಾಜ ಹಾಗೂ ಬಿಜೆಪಿ ಮುಖಂಡ ಜಗದೀಶ್ ಹಿರೇಮನಿ, ವಾದಿರಾಜ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button