ದೇಶ

ತಡಮಾಡದೆ ಹಂತ ಹಂತವಾಗಿ ಭೌತಿಕ ತರಗತಿಗಳ ಆರಂಭಿಸುವುದು ಸೂಕ್ತ : ICMR

ನವದೆಹಲಿ, ಸೆ.27- ಗ್ರಾಮೀಣ ಭಾಗದ ಶೇ.92ರಷ್ಟು, ನಗರ ಪ್ರದೇಶದ ಶೇ.76ರಷ್ಟು ವಿದ್ಯಾರ್ಥಿಗಳು ಸಮರ್ಪಕ ಕಲಿಕೆಯಿಂದ ದೂರ ಉಳಿದಿದ್ದು, ಇನ್ನೂ ಮುಂದೆಯೂ ತಡ ಮಾಡದೆ ಹಂತ ಹಂತವಾಗಿ ಶಾಲೆಗಳ ಭೌತಿಕ ತರಗತಿಗಳನ್ನು ಆರಂಭಿಸುವ ಅಗತ್ಯ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹೇಳಿದೆ.

ವಿವಿಧ ಸಮೀಕ್ಷೆಗಳ ಪ್ರಕಾರ ಶಾಲೆಗಳು ಕೋವಿಡ್ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಶಕ್ತಿ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಿದೆ. ಜಾಗತಿಕವಾಗಿಯೂ ಶಾಲೆಗಳು ರೋಗವಾಹಕಗಳಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ದೇಶದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಬಹುದು ಎಂದು ಐಸಿಎಂಆರ್‍ನ ತಜ್ಞರು ಗ್ರಹಿಸಿರುವ ಸಂಶೋಧನಾ ವರದಿಗಳು ತಿಳಿಸಿವೆ.

ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಸ್ಪಷ್ಟ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದರೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಲಾಗಿದೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ. ಕರ್ನಾಟಕದಲ್ಲಿ ಆರನೆ ತರಗತಿ ಮೇಲ್ಪಟ್ಟು ತರಗತಿಗಳು ಆರಂಭವಾಗಿವೆ. ಒಂದರಿಂದ ಎಲ್‍ಕೆಜಿವರೆಗೆ ತರಗತಿಗಳು ಶುರುವಾಗಿಲ್ಲ. ಕೆಲವು ಖಾಸಗಿ ಶಾಲೆಗಳು ಅನೌಪಚಾರಿಕವಾಗಿ ತರಗತಿಗಳನ್ನು ನಡೆಸುತ್ತಿವೆಯಾದರೂ ಅದು ಪರಿಣಾಮಕಾರಿಯಾಗಿಲ್ಲ.

ಆನ್‍ಲೈನ್ ಕಲಿಕೆಯಲ್ಲಿ ಮಕ್ಕಳ ಮಾನಸಿಕ ಮತ್ತು ಭೌದ್ಧಿಕ ವಿಕಸನವಾಗುತ್ತಿಲ್ಲ. ಸುದೀರ್ಘ ಅವಧಿವರೆಗೂ ಶಾಲಾ ಕಾಲೇಜುಗಳನ್ನು ಮುಚ್ಚುವುದು ಒಳ್ಳೆಯದಲ್ಲ ಎಂದು ಐಸಿಎಂಆರ್‍ನ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್, ಸಮಿರಣ್ ಪಾಂಡ, ತನು ಆನಂದ್ ಅವರು ವೈದ್ಯಕೀಯ ಜನರಲ್‍ಗೆ ಬರೆದಿರುವ ಲೇಖನಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್‍ನಿಂದಾಗಿ 500 ದಿನಗಳಿಂದಲೂ ಶಾಲೆಗಳು ಮುಚ್ಚಿವೆ. ದೇಶಾದ್ಯಂತ 320 ಮಿಲಿಯನ್ ಮಕ್ಕಳು ಇದರ ಪರಿಣಾಮ ಅನುಭವಿಸುತ್ತಿದ್ದಾರೆ ಎಂದು ಯುನೆಸ್ಕೋ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. ಆನ್‍ಲೈನ್ ಮತ್ತು ಆಫ್‍ಲೈನ್ ಕ್ಲಾಸ್ ಪರಿಣಾಮಗಳ ಬಗ್ಗೆ ದೇಶದ 15 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

1362 ಮನೆಗಳ ಮಾದರಿ ಸ್ಯಾಂಪಲ್‍ನಲ್ಲಿ ಗ್ರಾಮೀಣ ಭಾಗದ ಶೇ.8ರಷ್ಟು, ನಗರ ಪ್ರದೇಶದ ಶೇ.24ರಷ್ಟು ಮಕ್ಕಳ ಮಾತ್ರ ಸರಿಯಾದ ಕಲಿಕೆ ಮಾಡಲು ಸಾಧ್ಯವಾಗಿದೆ. ಉಳಿದಂತೆ ಶೇಕಡ ಅರ್ಧದಷ್ಟು ಮಕ್ಕಳು ಕೆಲವು ಪದಗಳನ್ನು ಓದಲು ಅಸಮರ್ಥರಿದ್ದಾರೆ ಎಂದು ಸಮೀಕ್ಷೆ ಗುರುತಿಸಿದೆ.

ಮತ್ತೊಂದು ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗದಿರುವುದರಿಂದ ಸ್ನೇಹಿತರ ನಡುವಿನ ಬಾಂಧವ್ಯವನ್ನು ಕಳೆದುಕೊಂಡಿದ್ದಾರೆ. ಪೋಷಕರು ಮತ್ತು ಮಕ್ಕಳ ನಡುವೆ ಸಾಮಾಜಿಕ ಸಂವಹನ ಕುಸಿಯುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಾಮರಸ್ಯವೂ ಮರೆಯಾಗಿದೆ. ಇನ್ನೂ ಹೆಚ್ಚು ಕಾಲ ಶಾಲೆಗಳನ್ನು ಮುಚ್ಚಿಡುವುದು ಸೂಕ್ತವಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button