ದೇಶ

ಅಜ್ಮೀರ್ ದರ್ಗಾ | ವಿವಾದದ ಕಿಡಿ ಹೊತ್ತಿಸಿದ ನ್ಯಾಯಾಲಯದ ನೋಟಿಸ್

ನವದೆಹಲಿ: ಪ್ರಖ್ಯಾತ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾವನ್ನು ಶಿವನ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪವು ಸಂಘರ್ಷದ ಸ್ಥಿತಿಗೆ ತಿರುಗಿದೆ. ಗುರುವಾರ ಈ ಕುರಿತು ಮುಸ್ಲಿಂ ಸಮುದಾಯದ ನಾಯಕರು, ರಾಜಕಾರಣಿಗಳು ಮತ್ತಿತರರು ‘ಕಳವಳಕಾರಿ, “ನೋವಿನ ಸಂಗತಿ’ಎಂದು ಆಘಾತ ವ್ಯಕ್ತಪಡಿಸುವ ಮೂಲಕ ಈ ಬಿಕ್ಕಟ್ಟು ಮತ್ತಷ್ಟು ಹಿಗ್ಗಿದೆ.

ಅಜ್ಮೀರ್ ದರ್ಗಾವನ್ನು ಶಿವನ ದೇವಾಲಯವನ್ನಾಗಿ ಘೋಷಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ಸಂಬಂಧ, ಅಜ್ಮೀರ್ ನ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ. ದರ್ಗಾಗಳ ತವರು ಎಂದೇ ವಿಶ್ವವಿಖ್ಯಾತವಾಗಿರುವ ಅಜ್ಮೀರ್ ದರ್ಗಾಗೆ ಸಾವಿರಾರು ಭಕ್ತರು ಧರ್ಮಾತೀತವಾಗಿ ಪ್ರತಿ ದಿನ ಭೇಟಿ ನೀಡುತ್ತಾರೆ.

ಮುಘಲರ ಕಾಲದ ಶಾಹಿ ಜಮಾ ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಉತ್ತರ ಪ್ರದೇಶದ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದ ನಂತರ ಸಂಭಲ್ ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಮೃತಪಟ್ಟ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಈ ನೋಟಿಸ್ ಜಾರಿಯಾಗಿದೆ. ಶಾಹಿ ಜಮಾ ಮಸೀದಿಯನ್ನು ದೇವಾಲಯವೊಂದನ್ನು ಧ್ವಂಸಗೊಳಿಸಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಇದರ ಬೆನ್ನಿಗೇ ಅಜ್ಮೀರ್ ನ ಸ್ಥಳೀಯ ನ್ಯಾಯಾಲಯವೊಂದು ಅಜ್ಮೀರ್ ದರ್ಗಾ ಸಮೀಕ್ಷೆಗೆ ನೋಟಿಸ್ ಜಾರಿಗೊಳಿಸಿರುವುದರಿಂದ ಅಜ್ಮೀರ್ ಕೂಡಾ ಸಂಭಲ್ ನಂತೆ ಕೋಮು ಹಿಂಸಾಚಾರಕ್ಕೆ ತುತ್ತಾಗಬಹುದು ಎಂಬ ಕಳವಳ ವ್ಯಕ್ತವಾಗತೊಡಗಿದೆ.ಈ ಕುರಿತು ಪ್ರತಿಕ್ರಿಯಿಸಲು ದರ್ಗಾ ಸಮಿತಿಯ ಅಧಿಕಾರಿಗಳು ನಿರಾಕರಿಸಿದ್ದರೂ, ಇದು ಸಮಾಜವನ್ನು ಕೋಮು ನೆಲೆಯಲ್ಲಿ ವಿಭಜಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅಜ್ಮೀರ್ ದರ್ಗಾದ ಖಾದಿಮ್(ಉಸ್ತುವಾರಿಗಳು)ಗಳನ್ನು ಪ್ರತಿನಿಧಿಸುವ ಅಂಜುಮನ್ ಸೈಯದ್ ಝದ್ಗನ್ ಕಾರ್ಯದರ್ಶಿ ಸೈಯದ್ ಚಿಶ್ತಿ ಬಣ್ಣಿಸಿದ್ದಾರೆ.ಸೌಹಾರ್ದತೆ ಮತ್ತು ಜಾತ್ಯತೀತತೆಯ ಪ್ರತೀಕವಾಗಿರುವ ಈ ದರ್ಗಾವು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲದಡಿ ಬರುವುದರಿಂದ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಇದರಲ್ಲಿ ಯಾವುದೇ ಕೆಲಸವಿಲ್ಲ ಎಂದು ಅವರು ಹೇಳಿದ್ದಾರೆ.”ಮುಸ್ಲಿಂ ಸಮುದಾಯವು ಬಾಬ್ರಿ ಮಸೀದಿ ಪ್ರಕರಣವನ್ನು ಅಂಗೀಕರಿಸಿತು. ಭವಿಷ್ಯದಲ್ಲಿ ಏನೂ ಆಗುವುದಿಲ್ಲ ಎಂದು ಭಾವಿಸಿತ್ತು. ದುರದೃಷ್ಟವಶಾತ್, ಅಂತಹ ಪ್ರಕರಣಗಳು ಮತ್ತೆ ಮತ್ತೆ ಆಗುತ್ತಿವೆ. ಉತ್ತರ ಪ್ರದೇಶದ ಸಂಭಲ್ ನ ನಿದರ್ಶನ ನಮ್ಮ ಮುಂದಿದೆ. ಇದು ಸ್ಥಗಿತಗೊಳ್ಳಲೇಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ಅಂಜುಮನ್ ಅನ್ನೂ ಪ್ರತಿವಾದಿಯನ್ನಾಗಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

ದೇವಾಲಯದಲ್ಲಿ ಪ್ರಾರ್ಥನೆ ಪ್ರಾರಂಭಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸೆಪ್ಟೆಂಬರ್ ತಿಂಗಳಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಲಾಗಿದೆ.

“ಅಜ್ಮೀರ್ ದರ್ಗಾವನ್ನು ಸಂಕಟ್ ವಿಮೋಚನ ಮಹಾದೇವ ದೇವಾಲಯ ಎಂದು ಘೋಷಿಸಬೇಕು ಹಾಗೂ ಒಂದು ವೇಳೆ ದರ್ಗಾವೇನಾದರೂ ನೋಂದಣಿ ಹೊಂದಿದ್ದರೆ, ಅದನ್ನು ರದ್ದುಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅದರ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೂಲಕವೇ ನಡೆಸಬೇಕು. ಅಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಹಿಂದೂಗಳಿಗೆ ನೀಡಬೇಕು” ಎಂದು ಅರ್ಜಿದಾರ ವಿಷ್ಣು ಗುಪ್ತ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದರ್ಗಾವನ್ನು ನಿರ್ಮಿಸಲಾಗಿರುವ ಸ್ಥಳದಲ್ಲಿ ಶಿವನ ದೇವಾಲಯವಿತ್ತು ಎಂಬ ತಮ್ಮ ವಾದವನ್ನು ಸಮರ್ಥಿಸಲು ಹಿಂದೂ ಸೇನಾ ಅಧ್ಯಕ್ಷರೂ ಆಗಿರುವ ವಿಷ್ಣು ಗುಪ್ತ, ವಿದ್ವಾಂಸ ಹರ್ ಬಿಲಾಸ್ ಸರ್ದಾ ರಚಿಸಿರುವ ಕೃತಿಯೊಂದನ್ನು ಉಲ್ಲೇಖಿಸಿದರು.

ಅಜ್ಮೀರ್ ದರ್ಗಾ ಸ್ಥಳದಲ್ಲಿ ಶಿವನ ದೇವಾಲಯವಿತ್ತು ಹಾಗೂ ಅದನ್ನು ಧ್ವಂಸಗೊಳಿಸಿದ ಮುಸ್ಲಿಂ ಆಕ್ರಮಣಕಾರರು, ಆ ಜಾಗದಲ್ಲಿ ದರ್ಗಾವನ್ನು ನಿರ್ಮಿಸಿದರು ಎಂಬುದನ್ನು ಪತ್ತೆ ಹಚ್ಚಲು ನಾನು ಎರಡು ವರ್ಷಗಳ ಕಾಲ ಸಂಶೋಧನೆಯನ್ನೂ ನಡೆಸಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.

ನ್ಯಾಯಾಲಯದ ನೋಟಿಸ್ ಅನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಮರ್ಥಿಸಿಕೊಂಡಿದ್ದು, ಈ ಕುರಿತು ನಡೆಯುತ್ತಿರುವ ಚರ್ಚೆ ಹಾಗೂ ವ್ಯಕ್ತವಾಗುತ್ತಿರುವ ಕಳವಳಗಳ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಜ್ಮೀರ್ ದರ್ಗಾವನ್ನು ಶಿವನ ದೇವಾಲಯವೆಂದು ಘೋಷಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿಯು 1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಯುನೈಟೆಡ್ ಮುಸ್ಲಿಂ ಪೋರಮ್ ರಾಜಸ್ಥಾನ್ ನ ಅಧ್ಯಕ್ಷ ಮುಝಾಫ್ಫರ್ ಭಾರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಜವಾಹರ ಲಾಲ್ ನೆಹರೂ ಪ್ರಾರಂಭಿಸಿದ್ದ ವಾರ್ಷಿಕ ಉರುಸ್ ಸಂದರ್ಭದಲ್ಲಿ ಚಾದರ ಅರ್ಪಿಸುವ ಸಂಪ್ರದಾಯವನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಅನುಸರಿಸಿದ್ದಾರೆ ಎಂಬುದರತ್ತಲೂ ಅವರು ಬೊಟ್ಟು ಮಾಡಿದ್ದಾರೆ.

ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಕೂಡಾ ನ್ಯಾಯಾಲಯದ ನೋಟಿಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇವನ್ನು ದೇಶವನ್ನು ಅಸ್ಥಿರಗೊಳಿಸಲು ಮಾಡಲಾಗುತ್ತಿದೆ. ಇವು ದೇಶದ ಪರವಾಗಿಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಈ ಜನರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಜೆಪಿ ಮತ್ತು ಆರೆಸ್ಸೆಸ್ಸಸ ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಪಿ(ಐ)ಎಂ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಗನಿ ಲೋನೆ, ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕೂಡಾ ನ್ಯಾಯಾಲಯದ ನೋಟಿಸ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಾರ್ಥನಾ ಸ್ಥಳಗಳ ಕಾಯ್ದೆ, 1991ರ ಪ್ರಕಾರ, 1947ಕ್ಕೂ ಹಿಂದೆ ನಿರ್ಮಿಸಲಾಗಿರುವ ಪ್ರಾರ್ಥನಾ ಸ್ಥಳಗಳ ಸ್ವರೂಪವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button