ಆರ್ಸಿಬಿ ಮಾಲೀಕತ್ವ ವಿಜಯ್ ಮಲ್ಯ ಬಳಿ ಇದ್ದಿದ್ದರೆ ತಂಡದಲ್ಲಿ ಕನ್ನಡಿಗರದ್ದೇ ದರ್ಬಾರ್!

ಬೆಂಗಳೂರು : ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡದ ಮಾಲೀಕತ್ವ ಮದ್ಯದ ದೊರೆ ವಿಜಯ್ಯಲ್ಯ ಅವರ ಬಳಿಯೇ ಇರುತ್ತಿದ್ದರೆ ತಂಡದಲ್ಲಿ ಕನ್ನಡಿಗರ ದರ್ಬಾರ್ ಹೆಚ್ಚಾಗುತ್ತಿದ್ದು ಎಂದು ಆರ್ಸಿಬಿ ಅಭಿಮಾನಿಗಳು ಟ್ವಿಟ್ ಮಾಡಿ ತಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಬ್ ರಾಷ್ಟ್ರದ ಜೆಡ್ಡಾದಲ್ಲಿ ನಡೆಯುತ್ತಿರುವ ಮೆಗಾ ಹರಾಜಿಗೂ ಮುನ್ನವೇ ಈ ಬಾರಿ ಆರ್ ಸಿಬಿ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಅವರ ಆಗಮನವಾಗುತ್ತದೆ, ಅವರೇ ಆರಂಭಿಕ ಹಾಗೂ ನಾಯಕನ ಸ್ಥಾನವನ್ನು ತುಂಬುತ್ತಾರೆ ಎಂಬ ಬೆಟ್ಟದಷ್ಟು ನಿರೀಕ್ಷೆಗಳನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಕೆ.ಎಲ್. ರಾಹುಲ್ ಬಿಡ್‌ಗೆ ಬಂದಾಗ ಆರಂಭದಲ್ಲಿ ಬೆಂಗಳೂರು ಫ್ರಾಂಚೈಸಿ ಕನ್ನಡಿಗನನ್ನು ಶತಾಯ ಗತಾಯ ತಂಡಕ್ಕೆ ಕರೆ ತರುತ್ತಾರೆ ಎಂದು ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಆದರೆ ರಾಹುಲ್ ಮೊತ್ತ 10 ಕೋಟಿ ದಾಟುವ ಮುನ್ನವೇ ಆತನ ಮೇಲೆ ಒಲವು ಕಳೆದುಕೊಂಡರು. ಕೊನೆಗೆ 14 ಕೋಟಿಗೆ ರಾಹುಲ್ ಡೆಲ್ಲಿ ಕ್ಯಾಪಿಟಲ್ ತಂಡದ ಪಾಲಾದರು.
ಅದೇ ರೀತಿ ಕನ್ನಡಿಗರಾದ , ಅಭಿನವ್ ಮನೋಹರ್, ವೈಶಾಖ್ ವಿಜಯ್ ಕುಮಾರ್ ಅವರನ್ನು ಖರೀದಿಸುವಲ್ಲೂ ಆರ್ ಸಿಬಿ ಮಾಲೀಕರು ಒಲವು ತೋರಲಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು ವಿಜಯ್ ಮಲ್ಯ ಈಗಲೂ ತಂಡದ ಮಾಲೀಕರಾಗಿದ್ದರೆ ಕನ್ನಡಿಗರ ಹವಾವೇ ಇದ್ದು, ಒಂದೆರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿ ಸಬಹುದಿತ್ತು ಎಂದು ಟ್ವಿಟ್ ಮೂಲಕ ತಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಿಲ್ ಕುಂಬ್ಳೆ ನಮ್ಮ ಹುಡುಗ: ‘ನಾನು ವಿಜಯ್ ಮಲ್ಯರನ್ನು ಗೌರವಿಸುತ್ತೆವೆ. ಚೊಚ್ಚಲ ಐಪಿಎಲ್ ಮೆಗಾ ಹರಾಜಿನ ವೇಳೆ ಅನಿಲ್ ಕುಂಬ್ಳೆ ನಮ್ಮ ಲೋಕಲ್ ಹುಡುಗ ಆತನ ಖರೀದಿಗೆ ಯಾರೂ ಮುಂದಾಗಬೇಡಿ ಎಂದು ಇತರ ತಂಡಗಳ ಫ್ರಾಂಚೈಸಿಗಳಿಗೆ ತಮಾಷೆ ರೂಪದಲ್ಲಿ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಮಲ್ಯ ಇಂದು ತಂಡದ ಮಾಲೀಕರಾಗಿದ್ದರೆ ತಂಡಕ್ಕೆ ಕೆ.ಎಲ್. ರಾಹುಲ್‌ರನ್ನು ಕರೆ ತರುತ್ತಿದ್ದರು’ ಎಂದು ಅಭಿಮಾನಿಯೊಬ್ಬರು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಆರ್ಸಿಬಿ ಯಾವ ಆಟಗಾರರಿಗೆ ಕಾಯುತ್ತಿದೆ: ಐಪಿಎಲ್ ಮೆಗಾ ಹರಾಜಿನ ವಿಶ್ಲೇಷಣೆಯ ವೇಳೆ ಖ್ಯಾತ ಕ್ರಿಕೆಟ್ ವಿಶ್ಲೇಷಕರಾದ ಶ್ರಿನಿವಾಸಮೂರ್ತಿ ಹಾಗೂ ವೆಂಕಟೇಶ್ ಪ್ರಸಾದ್ ಅವರು ಕಣ್ಣ ಮುಂದೆ ಸ್ಟಾರ್ ಆಟಗಾರರು ಬೇರೆ ತಂಡದ ಪಾಲಾಗುತ್ತಿರುವಾಗ ಪರ್ಸ್ ನಲ್ಲಿ 83 ಕೋಟಿ ಇಟ್ಟುಕೊಂಡಿರುವ ಆರ್ ಸಿಬಿ ಮಾಲೀಕರು ಯಾವ ಆಟಗಾರರ ಖರೀದಿಗಾಗಿ ಕಾಯುತ್ತಿದ್ದಾರೆ ಎಂದು ತಮ ಆಕ್ರೋಶ ವ್ಯಕ್ತಪಡಿಸಿದರು. ವಿಜಯ್ ಮಲ್ಯ ಮಾಲೀಕತ್ವದಲ್ಲಿ ಆರ್ ಸಿಬಿ ತಂಡದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ಹಾಗೂ ಇತರರದ್ದೆ ಕಾರುಬಾರು.