ಸಿನಿಮಾ

ಸ್ಟಾರ್ ನಟರಿಗೆ ಪತ್ರಕರ್ತ ಜೋಗಿ ಬಹಿರಂಗ ಪತ್ರ

ಸಿನಿಮಾ ಪತ್ರಕರ್ತ, ಕಾದಂಬರಿಕಾರ ಜೋಗಿಯವರು ಕನ್ನಡದ ಸ್ಟಾರ್ ನಟರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ‘ಸ್ಟಾರ್ ನಟರಿಗೆ ಪತ್ರ’ ಎಂದು ಜೋಗಿಯವರು ಹೇಳಿದ್ದಾರಾದರೂ ಈ ಪತ್ರ ಸಿನಿಮಾ ಕ್ಷೇತ್ರದಲ್ಲಿ ಕೆಲಸವವರು ಹಾಗೂ ಸಿನಿಮಾ ಪ್ರೇಮಿಗಳೂ ಓದಬೇಕಾದ ಪತ್ರ.

ಜೋಗಿಯವರು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪತ್ರದ ಯಥಾವತ್ತು ಇಲ್ಲಿದೆ.

”ನನ್ನ ಪ್ರೀತಿಯ ಸ್ಟಾರ್ ನಟರೇ,

ಕನ್ನಡದಲ್ಲಿ ಒಂದು ಅದ್ಭುತವಾದ ಸಿನಿಮಾ ಬಂದಿದೆ. ಅದರ ಹೆಸರು ಪುಕ್ಸಟ್ಟೆ ಲೈಫು. ರಾಷ್ಟ್ರಪ್ರಶಸ್ತಿ ಪಡೆದಿರುವ ಸಂಚಾರಿ ವಿಜಯ್ ನಟಿಸಿರುವ ಸಿನಿಮಾ ಅದು. ಸಿನಿಮಾವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅರವಿಂದ್ ಕುಪ್ಳೀಕರ್ ಇದನ್ನು ನಿರ್ದೇಶಿಸಿದ್ದಾನೆ. ಆತ ನನ್ನ ಗೆಳೆಯನೂ ಆಗಿರುವುದರಿಂದ ನಾಲ್ಕು ಮಾತು.

ಈ ಸಿನಿಮಾ ಬಹಳ ಚೆನ್ನಾಗಿದೆ. ಕಷ್ಟದಲ್ಲಿ,ನಷ್ಟದಲ್ಲಿ ಸಿನಿಮಾ ಮಾಡಿರುವ ಅರವಿಂದ್ ಮತ್ತು ಸೋಮಯಾಜಿ ತಮ್ಮ ಎಲ್ಲ ಪ್ರತಿಭೆಯನ್ನೂ ಈ ಚಿತ್ರಕ್ಕೆ ಹಾಕಿದ್ದಾರೆ. ನಿಜಕ್ಕೂ ಒದ್ದಾಡಿದ್ದಾರೆ. ಕೊರೋನಾ ಅವಧಿಯಲ್ಲಿ ಅವರು ಪಟ್ಟ ಸಂಕಟವನ್ನು ನಾನು ಕಲ್ಪಿಸಿಕೊಳ್ಳಬಲ್ಲೆ.

ದೊಡ್ಜ ದೊಡ್ಡವರೇ ತಮ್ಮ ಸಿನಿಮಾ ತೆರೆಗೆ ತರಲು ಅಂಜುತ್ತಿರುವ ಹೊತ್ತಲ್ಲಿ ಈ ಹುಡುಗರು ‘ಪುಕ್ಸಟ್ಟೆ ಲೈಫು’ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಅದರ ನಾಯಕ ನಟ ಕಣ್ಮರೆಯಾಗಿದ್ದಾನೆ, ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಎಂಬ ಯಾವ ರಿಯಾಯಿತಿಯೂ ಈ ಚಿತ್ರಕ್ಕೆ ಬೇಕಿಲ್ಲ.

ಸ್ಟಾರ್ ನಟರೆಲ್ಲ ಇಂಥ ಚಿತ್ರಕ್ಕೆ ಸ್ವಯಂ ಪ್ರೇರಣೆಯಿಂದ ಬಂದು ಅದನ್ನು ಗೆಲ್ಲಿಸಬೇಕು ಎಂಬುದು ನನ್ನ ಅನಿಸಿಕೆ. ಇಂಥ ಹುಡುಗರು ಗೆದ್ದರೆ ಮಾತ್ರ ಚಿತ್ರರಂಗ ಗೆಲ್ಲುತ್ತದೆ. ನಿನ್ನೆ ಈ ಸಿನಿಮಾಕ್ಕೆ ಹೋದ ನನ್ನ ಸಹೋದ್ಯೋಗಿ ಒಬ್ಬರು ಜನವೇ ಇಲ್ಲ ಅಂತ ಮೆಸೇಜ್ ಮಾಡಿದ್ದರು. ಹೌಸ್ ಫುಲ್ ಆಗಬೇಕಾಗಿದ್ದ ಸಿನಿಮಾ ಇದು. ಅದು ತುಂಬುಪ್ರದರ್ಶನ ಕಾಣಲು ನಿಮ್ಮೆಲ್ಲರ ಸಹಕಾರ ಬೇಕು.

ಕನ್ನಡದ ಹುಡುಗ ಒಳ್ಳೆಯ, ಅತ್ಯುತ್ತಮ ಮನರಂಜನೆಯ ಸಿನಿಮಾ ಮಾಡಿದ್ದಾನೆ. ದಯವಿಟ್ಟು ಅದನ್ನೊಮ್ಮೆ ನೋಡಿ, ನಾಲ್ಕು ಮಾತಾಡಿ, ಚಿತ್ರವನ್ನು ಗೆಲ್ಲಿಸಿ. ಇದು ಆ ಚಿತ್ರದ ಗೆಲುವಷ್ಟೇ ಅಲ್ಲ, ಕನ್ನಡದ ಗೆಲುವು ಕೂಡ. ಒಂದು ಭಾಷೆಯ ಪ್ರತಿಭೆಗೆ ನೀವು ಮನ್ನಣೆ ನೀಡುತ್ತಿದ್ದೀರಿ ಮರೆಯದಿರಿ.

ಈ ಚಿತ್ರ ಚೆನ್ನಾಗಿದೆ ಅಂತ ನಿಮಗೆ ಯಾರೂ ಹೇಳದೇ ಇರಬಹುದು. ಪತ್ರಿಕಾ ವಿಮರ್ಶೆಗಳನ್ನು ನೀವು ನಂಬದೇ ಇರಬಹುದು. ಅದೆಲ್ಲ ಹಾಗಿರಲಿ, ಒಂದೂವರೆ ನಾವೆಲ್ಲ ಖಾಲಿ ಕೂತಿದ್ದೆವು. ಈ ಚಿತ್ರಕ್ಕಾಗಿ ಎರಡೂವರೆ ಗಂಟೆ ಕೊಡೋಣ. ಪುಕ್ಸಟ್ಟೆ ಲೈಫು ನೋಡಿ ಒಂದು ಟ್ವೀಟ್ ಮಾಡಿ.

ಅರವಿಂದ್ ಕುಪ್ಳೀಕರ್ ಎಂಬ ಅಪ್ಪಟ ಪ್ರತಿಭೆಗೆ ನಿಮ್ಮ ಬೆಂಬಲ ಇರಲಿ. ನಿಮ್ಮ ಸಿನಿಮಾಗಳನ್ನು ಅಭಿಮಾನಿಗಳು ಗೆಲ್ಲಿಸುತ್ತಾರೆ. ಇಂಥ ಪ್ರತಿಭಾವಂತರನ್ನು ನೀವೇ ಗೆಲ್ಲಿಸಬೇಕು”

ದಿವಂಗತ ನಟ ಸಂಚಾರಿ ವಿಜಯ್ ನಟನೆಯ ‘ಪುಗ್ಸಟ್ಟೆ ಲೈಫು’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಸಿನಿಮಾ ಬಹಳ ಚೆನ್ನಾಗಿದೆಯೆಂದೂ ಕನ್ನಡಕ್ಕೆ ಒಂದೊಳ್ಳೆ ಸಿನಿಮಾ ಇದೆಂದು ಹೇಳಲಾಗುತ್ತಿದೆ. ಆದರೆ ಹೆಚ್ಚಿನ ಜನ ಸಿನಿಮಾ ನೋಡುತ್ತಿಲ್ಲ. ‘ಪುಗ್ಸಟ್ಟೆ ಲೈಫು’ ಸಿನಿಮಾದಲ್ಲಿ ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಘಾಯಣ ರಘು, ಮಾತಂಗಿ ಪ್ರಸನ್ನ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಅರವಿಂದ್ ಕುಪ್ಳೀಕರ್ ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ ಮಂಸೋರೆ, ಪತ್ರಕರ್ತೆ ರೇಖಾ ರಾಣಿ ಹಾಗೂ ಇನ್ನೂ ಹಲವು ನಟ, ತಂತ್ರಜ್ಞರು ‘ಪುಗ್ಸಟ್ಟೆ ಲೈಫು’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

”ಅರವಿಂದ್ ಕುಪ್ಳೀಕರ್, ಕನ್ನಡಕ್ಕೊಬ್ಬ ಒಳ್ಳೆಯ ನಿರ್ದೇಶಕ ಸಿಕ್ಕ ಖುಷಿ ನನಗೆ. ಈ ಚಿತ್ರ ನೋಡಿ ಬಹಳ ದಿನಗಳ ನಂತರ ನಕ್ಕು ನಕ್ಕು ಹಗುರಾದೆ ಆದರೆ ಸಂಚಾರಿ ವಿಜಯನನ್ನು ನೋಡಿ ಅಳುತ್ತಲೇ ನಕ್ಕೆ. ಪುಗ್ಸಟ್ಟೆ ಲೈಫ್ ಒಂಥರಾ ಸಂಚಾರಿ ತಂಡದವರ ಒಡನಾಡಿ ಚಿತ್ರ. ಇಲ್ಲಿರುವ ನಟ-ನಿರ್ದೇಶಕ ಅರವಿಂದ್ ಕುಪ್ಳೀಕರ್, ಸಂಚಾರಿ ವಿಜಯ್ ರಿಂದ ಹಿಡಿದು ಬಹುತೇಕ ಕಲಾವಿದರೆಲ್ಲರೂ ಮಂಗಳಮ್ಮನ ಸಂಚಾರಿ ತಂಡದ ಕಲಾವಿದರು..ಹಾಗಾಗಿ ಇಡೀ ಚಿತ್ರ ಪ್ರತಿಭೆಗಳ ಮಹಾಪೂರದಲ್ಲಿ ಮಿಂದೆದ್ದಿದೆ” ಎಂದಿದ್ದಾರೆ ಪತ್ರಕರ್ತೆ ರೇಖಾ ರಾಣಿ.

Related Articles

Leave a Reply

Your email address will not be published. Required fields are marked *

Back to top button