ನಂಜನಗೂಡಲ್ಲಿ ಚಿಕ್ಕಜಾತ್ರಾ ಮಹೋತ್ಸವ, ವಿಜೃಂಭಣೆಯ ತೆಪ್ಪೋತ್ಸವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯವರ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ನಂಜುಂಡೇಶ್ವರ ಸ್ವಾಮಿಯವರ ತೆಪ್ಪೋತ್ಸವವು ಕಪಿಲಾ ನದಿಯಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಬಣ್ಣ ಬಣ್ಣದ ಹೂವು ಹಾಗೂ ಚಿನ್ನ ವಜ್ರಾಭರಣಗಳಿಂದ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತ ಶ್ರೀ ನಂಜುಂಡೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಕಪಿಲಾ ನದಿ ತೀರದ ಸ್ನಾನ ಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ತೇಲುವ ದೇವಾಲಯದ ಮಾದರಿಯಲ್ಲಿ ನಿರ್ಮಿಸಲಾದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ತೆಪ್ಪೋತ್ಸವ ನಡೆಸಲಾಯಿತು. ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಚಲಿಸುವ ಮೂಲಕ ಭಕ್ತರಿಗೆ ದರ್ಶನ ನೀಡಿ ಭಕ್ತರ ಮನಸೂರೆಗೊಂಡಿತು.
ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಗಳು ದೇವಾಲಯದ ಪ್ರಧಾನ ಆಗಮಿಕರಾದ ಶ್ರೀ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ನಡೆಯಿತು. ನಂಜನಗೂಡು ನಗರವು ಸೇರಿದಂತೆ ವಿವಿಧ ಕಡೆಯಿಂದ ಬಂದ ಸಾವಿರಾರು ಭಕ್ತರು ಶ್ರೀನಂಜುಂಡೇಶ್ವರಸ್ವಾಮಿಯ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ತಮ್ಮ ಭಕ್ತಿ ನಮನ ಸಲ್ಲಿಸಿದರು. ನಂತರ ತೆಪೋತ್ಸವದಿಂದ ಹೊರ ತಂದ ಶ್ರೀಯವರ ಉತ್ಸವ ಮೂರ್ತಿಯನ್ನು ಸಣ್ಣ ರಥದಲ್ಲಿ ಕೂರಿಸಿ ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಅಧಿಕಾರಿ ಸತೀಶ್, ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ನಾಗಚಂದ್ರ ದೀಕ್ಷಿತ್ ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.