BSY ಜೊತೆ ಸಿಎಂ ಬೊಮ್ಮಾಯಿ ರಹಸ್ಯ ಚರ್ಚೆ..
ನಿನ್ನೆಯ ಭೇಟಿ ವೇಳೆ ಬಿ.ಎಸ್.ಯಡಿಯೂರಪ್ಪ ಸಹ ಅಸಮಾಧಾನ ಹೊರ ಹಾಕಿದ್ದಾರಂತೆ. ಹಿಂದೆ ಅವರ ಸಹೋದರ ಲಖನ್ ನಾಮಪತ್ರ ಸಲ್ಲಿಸಿದಾಗ ರಮೇಶ್ ಜಾರಕಿಹೊಳಿಗೆ ಕಾಲ್ ಮಾಡಿ ನಾನು ಮಾತನಾಡಿದ್ದೆ. ಎರಡು ಮೂರು ಬಾರಿ ಮಾತಾಡಿ, ನಾಮಪತ್ರ ವಾಪಸ್ಸು ಪಡೆಯುವಂತೆ ಸೂಚಿಸಿದ್ದೆ. ಅವಾಗ ಅವರು ನಮ್ಮ ಅಭ್ಯರ್ಥಿ ಗೆಲ್ಲಿಸುವ ಜವಬ್ದಾರಿ ನಮಗೆ ಬಿಡಿ ಅಂತ ಹೇಳಿದ್ದರು.
ಆದರೆ ಈಗ ಗೆಲ್ಲಿಸ್ತೀನಿ, ಎಂದು ಅವರ ಸಹೋದರನನ್ನೇ ಗೆಲ್ಲಿಸಿ, ಪಕ್ಷದ ಅಭ್ಯರ್ಥಿ ಸೋಲಿಸಿದ್ದಾರೆ. ಬೆಳಗಾವಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕಿತ್ತು. ಆದರೆ ಸೋತಿದ್ದಾರೆ, ಇದಕ್ಕೆಲ್ಲಾ ಕಾರಣ ಆ ಇಬ್ಬರು. ಏನು ಮಾಡಬೇಕು ಸರ್ ಎಂದು ಮುಖ್ಯಮಂತ್ರಿಗಳು ಸಲಹೆ ಕೇಳಿದ್ದಾರೆ ಎನ್ನಲಾಗಿದೆ. ಚುನಾವಣೆ ಫಲಿತಾಂಶದ ಕುರಿತು ಇಬ್ಬರೂ ನಾಯಕರು ವಿಸ್ತ್ರತ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಕ್ಕರ್
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಚನ್ನರಾಜು ಗೆಲುವಿನ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎದುರು ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್ ಹಿರಿಹಿರಿ ಹಿಗ್ಗಿದ್ದಾರೆ. ಈ ಸಂಬಂಧ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟರು. ಚುನಾವಣೆ ಫಲಿತಾಂಶ ಬಳಿಕ ಡಿಕೆಶಿ ಜತೆಗೆ ಓಪನ್ ವಾರ್ ಆಗಲಿ ಎಂದಿದ್ದ ರಮೇಶ್ ಜಾರಕಿಹೊಳಿಗೆ ಮಾತಿನಲ್ಲೇ ತಿವಿದರು. ಯಾರು ಯಾರನ್ನು ಸೋಲಿಸಿದ್ರು ಅಂತ ಸಿಎಂ ಬೊಮ್ಮಾಯಿ ಹೇಳಬೇಕು. ರಮೇಶನನ್ನು ಪಕ್ಕದಲ್ಲಿ ಕುರಿಸಿಕೊಂಡು ಬೊಮ್ಮಾಯಿ ಒಂದು ಮತ ನಾನು ಕೇಳಿತ್ತಿನಿ ಅಂದಿದ್ರು ಎಂದು ವ್ಯಂಗ್ಯವಾಡಿದರು.
ಇದು ಬಿಜೆಪಿಗೆ ತುಸು ಹಿನ್ನಡೆ
ಬಿಜೆಪಿ ಮತ್ತು ಕಾಂಗ್ರೆಸ್ ತಲಾ 11 ಸ್ಥಾನಗಳನ್ನ ಗೆದ್ದಿವೆ. ಜೆಡಿಎಸ್ ಆರರಲ್ಲಿ ಸ್ಪರ್ಧಿಸಿ ಎರಡು ಸ್ಥಾನ ಗೆದ್ದಿದೆ. ಬೆಳಗಾವಿಯಲ್ಲಿ ಪಕ್ಷೇತರನಾಗಿ ನಿಂತಿದ್ದ ಲಖನ್ ಜಾರಕಿಹೊಳಿ ಗೆದ್ದಿದ್ದಾರೆ. ಮೇಲ್ನೋಟಕ್ಕೆ ಇದು ಬಿಜೆಪಿಗೆ ತುಸು ಹಿನ್ನಡೆ ತಂದ ಫಲಿತಾಂಶವಾಗಿದೆ. ಆ ಪಕ್ಷ 14 ಸ್ಥಾನವಾದರೂ ಸಿಗಬಹುದು ಎಂದು ನಿರೀಕ್ಷಿಸಿತ್ತು. 12 ಸ್ಥಾನ ಸಿಕ್ಕಿದ್ದರೂ ಪರಿಷತ್ನಲ್ಲಿ ಬಿಜೆಪಿ ನಿರಾಳವಾಗಿರಬಹುದಾಗಿತ್ತು
ಈಗ 11 ಸ್ಥಾನ ಗೆದ್ದಿರುವ ಬಿಜೆಪಿ ಮೇಲ್ಮನೆಯಲ್ಲಿ ಹೊಂದಿರುವ ಸದಸ್ಯರ ಸಂಖ್ಯೆ 37ಕ್ಕೆ ಏರಿದೆ. ಕಾಂಗ್ರೆಸ್ ಬಲ 26ಕ್ಕೆ ವೃದ್ಧಿಸಿದೆ. ಜೆಡಿಎಸ್ 11 ಸದಸ್ಯರನ್ನ ಹೊಂದಿದೆ. ಪಕ್ಷೇತರ ಸದಸ್ಯ ಎಂದು ಇರುವುದು ಲಖನ್ ಮಾತ್ರವೇ.
ರಾಜ್ಯ ವಿಧಾನಪರಿಷತ್ನಲ್ಲಿ ಒಟ್ಟು ಬಲ ಇರುವುದು 75. ಇದರಲ್ಲಿ ಬಹುಮತಕ್ಕೆ ಬೇಕಿರುವುದು 38. ಅಂದರೆ ಬಿಜೆಪಿ ಒಂದು ಸ್ಥಾನದಿಂದ ಮಾತ್ರ ಬಹುಮತದಿಂದ ವಂಚಿತವಾಗಿದೆ. ಮಸೂದೆಗಳನ್ನ ಪಾಸ್ ಮಾಡಲು ಪರಿಷತ್ನಲ್ಲಿ ಬಹುಮತ ಅಗತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದರೆ, ರಮೇಶ್ ಜಾರಕಿಹೊಳಿ ವತಿಯಿಂದ ಕಣಕ್ಕಿಳಿದು ಗೆದ್ದಿರುವ ಲಖನ್ ಜಾರಕಿಹೊಳಿ ಅವರ ಬೆಂಬಲ ಸಿಕ್ಕರೆ ಬಿಜೆಪಿಗೆ ಬಹುಮತ ಬಂದಂತೆಯೇ.