ಕಾಂಗ್ರೆಸ್ ಪಕ್ಷಕ್ಕೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ವಾದಿ, ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ರಾಷ್ಟ್ರೀಯ ಜನತಾ ದಳ, ತೆಲಂಗಾಣ ರಾಷ್ಟ್ರ ಸಮಿತಿ, ರಾಷ್ಟ್ರೀಯ ಲೋಕದಳ, ವೆಲ್ಫೇರ್ ಪಾರ್ಟಿ ಮತ್ತು ಸ್ವರಾಜ್ ಇಂಡಿಯಾ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಪ್ರತಿಪಾದಿಸಿದ್ದಾರೆ.
ಈ ಪಕ್ಷಗಳ ಸಮಾವೇಶದಲ್ಲಿ 3 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಮೊದಲ ಪ್ರಸ್ತಾಪವು ಇವಿಎಂಗಳು ಮತ್ತು ‘ವಿವಿಪ್ಯಾಟ್’ (Voter Verifiable Paper Audit Trail) ಬಗ್ಗೆ ಆಗಿತ್ತು. ಇವಿಎಂಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಟ್ಯಾಂಪರಿಂಗ್ ಮಾಡಲು ಸಾಧ್ಯವಿಲ್ಲವೆಂದು ನಿರ್ಣಯಿಸಲು ಸಾಧ್ಯವಿಲ್ಲವೆಂದು ಈ ಪಕ್ಷಗಳು ಹೇಳಿಕೊಂಡಿವೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಲಾಗಿದೆ.
2ನೇ ನಿರ್ಣಯದಲ್ಲಿ ಹಣಬಲ ಮತ್ತು ತೋಳ್ಬಲವನ್ನು ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದ್ದು, ಇದರಿಂದ ಚುನಾವಣೆಯ ಪಾವಿತ್ರ್ಯತೆ ನಾಶವಾಗುತ್ತಿದೆ ಎಂದು ಹೇಳಲಾಗಿದೆ. ರಾಜಕೀಯ ದೇಣಿಗೆಗಾಗಿ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ರದ್ದುಪಡಿಸಬೇಕೆಂಬ ಆಗ್ರಹ ಇದೇ ವೇಳೆ ಕೇಳಿಬಂದಿದೆ.
ಮಾಧ್ಯಮ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ಧ್ರುವೀಕರಣವನ್ನು ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು 3ನೇ ನಿರ್ಣಯದಲ್ಲಿ ಹೇಳಿಕೊಂಡಿವೆ. ಆನ್ಲೈನ್ ನಕಲಿ ಸುದ್ದಿಗಳನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಈ ಪಕ್ಷಗಳು ಆರೋಪಿಸಿವೆ. ಹೀಗಾಗಿ ಈ ಎಲ್ಲಾ ವಿಷಯಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜೊತೆಗೆ ಸೇರಿ ಹೋರಾಟ ನಡೆಸುವುದಾಗಿ ಈ ಎಲ್ಲಾ ವಿಪಕ್ಷಗಳ ನಾಯಕರು ಹೇಳಿದ್ದಾರೆ.