ನಾರಾಯಣ ನೇತ್ರಾಲಯದಲ್ಲಿ ‘ರಿವರ್ಸಿಂಗ್ ಡಯಾಬಿಟಿಸ್’ ಕ್ಲಿನಿಕ್
ಬೆಂಗಳೂರು: ನಾರಾಯಣ ನೇತ್ರಾಲಯದ ರಾಜಾಜಿನಗರ ಮತ್ತು ಎಲೆಕ್ಟ್ರಾನಿಕ್ ಸಿಟಿ ಶಾಖೆಗಳಲ್ಲಿ ‘ರಿವರ್ಸಿಂಗ್ ಡಯಾಬಿಟಿಸ್’ ಕ್ಲಿನಿಕ್ ಸ್ಥಾಪಿಸಲಾಗಿದೆ.
‘ಈ ಕ್ಲಿನಿಕ್ನಿಂದ ಸಾರ್ವಜನಿಕರಿಗೆ ಅಪಾರ ಅನುಕೂಲವಾಗಲಿದೆ. ಮಧುಮೇಹವನ್ನು ನಿಯಂತ್ರಿಸುವ ವಿಧಾನಗಳ ಬಗ್ಗೆ ಇಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಭುಜಂಗ್ ಶೆಟ್ಟಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
’20ರಿಂದ 75 ವಯೋಮಾನದ ವ್ಯಕ್ತಿಗಳಲ್ಲಿ ಮಧುಮೇಹದಿಂದ ಅಂಧತ್ವಕ್ಕೆ ಕಾರಣವಾಗುತ್ತಿದೆ. ಅಧಿಕ ಸಕ್ಕರೆ ಅಂಶದಿಂದ ಗ್ಲುಕೋಮಾ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಮಧುಮೇಹದಿಂದ ಉಂಟಾಗುವ ಕಣ್ಣಿನ ಕಾಯಿಲೆಗಳನ್ನು ನಿರ್ದಿಷ್ಟವಾಗಿ ಪರಿಹರಿಸಲು ಮತ್ತು ಚಿಕಿತ್ಸೆ ನೀಡಲು 15 ತಜ್ಞರ ತಂಡವನ್ನು ನಾರಾಯಣ ನೇತ್ರಾಲಯ ನಿಯೋಜಿಸಿದೆ’ ಎಂದು ವಿವರಿಸಿದರು.
‘ನಾರಾಯಣ ನೇತ್ರಾಲಯದಲ್ಲಿ ಪ್ರತಿ ದಿನ ಸರಾಸರಿ 1500 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಶೇಕಡ 60ರಿಂದ 70ರಷ್ಟು ರೋಗಿಗಳು ಮಧುಮೇಹದಿಂದ ಬಳಲುತ್ತಿರುವುದು ಕಂಡು ಬಂದಿದೆ. ಮಧುಮೇಹದಿಂದ ಜೀವನದಲ್ಲಿ ಅಪಾರ ನೋವು ಸಹ ಅನುಭವಿಸುತ್ತಿದ್ದಾರೆ. ರೋಗಿಗಳಲ್ಲಿನ ಅಂಧತ್ವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಿವರ್ಸಿಂಗ್ ಡಯಾಬಿಟಿಸ್ ಚಿಕಿತ್ಸೆ ವಿಧಾನ ಕಂಡು ಹಿಡಿಯಲಾಯಿತು. ಈ ಮೂಲಕ ಮಧುಮೇಹ ಕಣ್ಣಿನ ಕಾಯಿಲೆಯಿಂದ ಲಕ್ಷಾಂತರ ಜನರನ್ನು ಉಳಿಸುವ ಪ್ರಯತ್ನ ಕೈಗೊಳ್ಳಲಾಗಿದೆ’ ಎಂದು ಭುಜಂಗ್ ಶೆಟ್ಟಿ ವಿವರಿಸಿದರು.