
ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ರಾಜ್ಯದ ವಿವಿಧೆಡೆ ಹನ್ನೊಂದು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರಗಿ, ಮೈಸೂರು, ರಾಮನಗರ ಮತ್ತು ಧಾರವಾಡ ಸೇರಿದಂತೆ ಹಲವೆಡೆ ಅಧಿಕಾರಿಗಳಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಬೆಳಗ್ಗೆಯಿಂದ ದಾಳಿ ಆರಂಭಗೊಂಡಿದ್ದು, ದಾಖಲೆಗಳು, ಆಸ್ತಿ, ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆಯಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್ ರಾಜ್ ಮನೆ ಮೇಲೆ ದಾಳಿ ವೇಳೆಯಲ್ಲಿ ರೂ. 1 ಲಕ್ಷ ನಗದು, ಇನ್ನೋವಾ ಕಾರು ಹಾಗೂ ಆಸ್ತಿಯ ದಾಖಲೆ ಪತ್ತೆಯಾಗಿವೆ. ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದ ಕಮಲ್ ರಾಜ್ ಹಲವು ಬಡ್ತಿ ಪಡೆದು ಸಹಾಯಕ ನಿರ್ದೇಶಕರಾಗಿದ್ದರು. ಚಿತ್ರದುರ್ಗ ಹಾಗೂ ದಾವಣೆಗೆರೆಯಲ್ಲಿ ಮನೆ, ಮೂರು ನಿವೇಶನ ಸೇರಿ ಇತರೆ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧಾರವಾಡದ ಕೆಐಎಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಭಜಂತ್ರಿ ಅವರ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವರದಿ : ಪೂರ್ಣಿಮಾ ಪವಾರ್ ಸಂಪಾದಕರು tv8kannada ಬೆಂಗಳೂರು