ರಾಜಕೀಯರಾಜ್ಯ

ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ: ಸಿಎಂ ಸಿದ್ದರಾಮಯ್ಯ ಕರೆ

ಸಂಡೂರು : ಹಣ ಬಲ, ತೋಳು ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರುತ್ತಾರೆ. ಅವರ ಬಗ್ಗೆ ಎಚ್ಚರ ವಹಿಸಿ. ಹಾಗೆಯೇ ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಗೆಲುವಿನ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಾನು ಬಳ್ಳಾರಿಗೆ ಬಂದಾಗ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಭಾಷಣ ಮಾಡೋಕೆ ಜಾಗ ಕೊಡದೆ ಅವಮಾನ ಮಾಡಿದ್ದರು. ದೇವಸ್ಥಾನದ ಬಾಗಿಲಲ್ಲಿ ಒಬ್ಬನೇ ನಿಂತು ಭಾಷಣ ಮಾಡಿ ಹೋಗಿದ್ದೆ. ಒಂದು ಮನೆಗೆ ಹೋಗಿ ಕುಡಿಯೋಕೆ ನೀರು ಕೇಳಿದರೆ ನನಗೆ ನೀರು ಕೊಡೋಕೂ ಜನ ಭಯ ಬೀಳ್ತಿದ್ರು ಎಂದು ರೆಡ್ಡಿ ದರ್ಬಾರ್ ಅವಧಿಯ ಘಟನೆಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು ದಬ್ಬಾಳಿಕೆ, ದೌರ್ಜನ್ಯದ ಆ ದಿನಗಳನ್ನು ನೆನಪಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ, ರೆಡ್ಡಿ ಬ್ರದರ್ಸ್ ಬಳ್ಳಾರಿಯನ್ನು ಹಾಳು ಮಾಡಲು ಬಿಡಬಾರದು ಎಂದು ನಾನು ಬೆಂಗಳೂರಿನಿಂದ ಪಾದಯಾತ್ರೆ ಮಾಡಿದೆ. ಬಳ್ಳಾರಿ ಜನರನ್ನು ಭಯಮುಕ್ತಗೊಳಿಸಿದ್ದು ಕಾಂಗ್ರೆಸ್ ಎಂದು ನೆನಪಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜಿಂದಾಲ್ ಗೆ ಕಾಲಿಟ್ಟರೂ ಜಿಲ್ಲಾ ಮಟ್ಟದ ಅಧಿಕಾರಿಗಳೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಣಲು ಬರಲಿಲ್ಲ. ಆ ಮಟ್ಟದಲ್ಲಿ ಅಧಿಕಾ- ರಿಗಳಲ್ಲಿ ಭಯ, ಭೀತಿ ಸೃಷ್ಟಿ ಮಾಡಿದ್ದರು.

ನಾನು ಇಬ್ರಾಹಿಂ ಚುನಾವಣಾ ಪ್ರಚಾರಕ್ಕೆ ಬಂದರೆ ಕಾರ್ಯಕ್ರಮ ಮಾಡಲು, ನನಗೆ ಭಾಷಣ ಮಾಡಲು ಜಾಗ ಕೊಡಲಿಲ್ಲ. ದೇವಸ್ಥಾನದ ಬಾಗಿಲಲ್ಲಿ ನಾನು ಭಾಷಣ ಮಾಡಿ ಹೋದೆ. ಮತ್ತೆ ಏನಾದರೂ ಜನಾರ್ಧನ ರೆಡ್ಡಿ ಪಟಾಲಂ ಬಳ್ಳಾರಿಯಲ್ಲಿ ಬೆಳೆದರೆ ಮತ್ತೆ ಅದೇ ಭೀತಿ, ಭಯದಲ್ಲಿ ಬಳ್ಳಾರಿ ನರಳಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ. ಬಿಜೆಪಿಯನ್ನು ಸೋಲಿಸಿ ಬಳ್ಳಾರಿಯನ್ನು ಉಳಿಸಿ ಎಂದು ಕರೆ ನೀಡಿದರು.

ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲೀನಿಕ್ ಗಳು ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲವೂ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಬಿಜೆಪಿ ಅವಧಿಯಲ್ಲಿ ಲೂಟಿ ಲೂಟಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ ಎಂದರು.

ಹೈದ್ರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371 ಜೆ ಜಾರಿ ಮಾಡಿದ್ದು ಕಾಂಗ್ರೆಸ್, ನಮ್ಮ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಮತ್ತು ನಾನು ಸೇರಿ 371 ಜೆ ಜಾರಿ ಮಾಡಲು ಕಾರಣ. ಬಳಿಕ ನಾನು ಮುಖ್ಯಮಂತದರಿಯಾಗಿ 5000 ಕೋಟಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡಿದೆ. 371 ಜೆ ಬಂದಿದ್ದರಿಂದ ಇಲ್ಲಿನ ಮಕ್ಕಳು ಎಂಜಿನಿಯರ್ ಗಳಾದರು. ಡಾಕ್ಟರ್ ಗಳಾದರು. ಸರ್ಕಾರಿ ಕೆಲಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಲು ಅವಕಾಶವಾಯಿತು ಎಂದು ಹೇಳಿದರು.

ಈಗ ಅವರು ಅಕ್ರಮ ಗಣಿಗಾರಿಕೆಯ ಹಣದ ಚೀಲಗಳನ್ನು ಹೊತ್ತುಕೊಂಡು ಬಂದು ಕುಳಿತಿದ್ದಾರೆ. ಅವರ ಹಣಕ್ಕೆ ಮರುಳಾಗುತ್ತೀರಾ ? ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆದ ಕಾಂಗ್ರೆಸ್ ಕೈ ಹಿಡಿಯುತ್ತೀರಾ ಪ್ರಾಮಾಣಿಕವಾಗಿ ಯೋಚಿಸಿ ನಿರ್ಧರಿಸಿ ಎಂದರು. ಹತ್ತು ಹಲವು ಭಾಗ್ಯಗಳನ್ನು ಕೊಟ್ಟಿದ್ದು, ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿ ವರ್ಷಕ್ಕೆ 56 ಸಾವಿರ ಕೋಟಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಹಾಕ್ತಾ ಇರುವುದು ನಮ್ಮ ಸರ್ಕಾರ. ಆದ್ದರಿಂದ ನಿಮ್ಮ ಬದುಕಿಗೆ ಪ್ರತೀ ತಿಂಗಳು ಬೆಳಕು ನೀಡುವ ನಮಗೆ ಬೆಂಬಲಿಸಬೇಕೋ, ಚುನಾವಣೆ ಬಂದಾಗ ಮಾತ್ರ ಕೊಡುವ ಅಕ್ರಮ ಗಣಿಗಾರಿಕೆಯ ಹಣ- ಕೈ ಓಟು ಹಾಕಿದ್ರೆ ಅದು ಅನ್ಯಾಯ ಆಗಲ್ವಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು ಅನ್ನಪೂರ್ಣ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.

ನಾವಿನ್ನೂ ಮೂರೂವರೆ ವರ್ಷ ಅಧಿಕಾರದಲ್ಲಿ ಇರ್ತೀವಿ. ಅಲ್ಲಿಯವರೆಗೂ ನಾವು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುಂದುವರೆಸ್ತೀವಿ. ಬಿಜೆಪಿ ಅಪಪ್ರಚಾರವನ್ನು ನಂಬಬೇಡಿ. ಸುಳ್ಳುಗಳಿಗೆ ಮೋಸ ಹೋಗಬೇಡಿ. ಹೃದಯದ ಮಾತು ಕೇಳಿ ಅಭಿವೃದ್ಧಿಗೆ ನಿಮ್ಮ ಮತ ನೀಡಿ. ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ. ಅನ್ನಪೂರ್ಣಮ್ಮ ಅವರಿಗೆ ಬೀಳುವ ಪ್ರತೀ ಓಟು ನನಗೆ ಹಾಕಿದಂತೆ, ಸಂತೋಷ್ ಲಾಡ್ ಅವರಿಗೆ ಹಾಕಿದಂತೆ ಎಂದರು.

ವರದಿ :C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button