ಬೆಂಗಳೂರಿನ ವಕೀಲರೊಬ್ಬರು ಹೋಟೆಲ್‌ಗೆ ಹೋದಾಗ ತಾನು ಆರ್ಡರ್ ಮಾಡಿದ್ದ ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ ಪತ್ತೆಯಾಗಿತ್ತು. ನಂತರ, ಆ ವಕೀಲರು ಕಲಬೆರಕೆ ಆಹಾರ ನೀಡಿದ್ದಕ್ಕಾಗಿ ನಗರದ ಗ್ರಾಹಕರ ನ್ಯಾಯಾಲಯದಲ್ಲಿ ಆ ಹೋಟೆಲ್ ವಿರುದ್ಧ ಕೇಸ್ ಹಾಕಿ 55,000 ರೂಪಾಯಿ ಪರಿಹಾರ ಪಡೆದಿದ್ದಾರೆ.
ತೀರ್ಪಿನ ವಿರುದ್ಧ ಉಪಾಹಾರ ಗೃಹದ ಮಾಲೀಕರು ಮೇಲ್ಮನವಿ ಸಲ್ಲಿಸಿದರೂ ಸಹ ರಾಜ್ಯ ಗ್ರಾಹಕರ ವೇದಿಕೆಯು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿಯಿತು. ಹೋಟೆಲ್ ತನ್ನ ಲೋಪಗಳಿಗೆ ಗ್ರಾಹಕರಿಗೆ ಪಾವತಿಸಲೇಬೇಕೆಂದು ಹೇಳಿದರು.
ಸೆಪ್ಟೆಂಬರ್ 15, 2016 ರಂದು, ವಕೀಲ ಮತ್ತು ಬೆಂಗಳೂರಿನ ಗಾಂಧಿ ನಗರ ನಿವಾಸಿ 57 ವರ್ಷದ ಕೆ.ಎಂ. ರಾಜಣ್ಣ ಮತ್ತು ಅವರ ಸ್ನೇಹಿತ ಗಾಂಧಿನಗರದ ಕಪಾಲಿ ಥಿಯೇಟರ್ ಎದುರಿನ ಕಾಮತ್ ಹೋಟೆಲ್‌ಗೆ ಭೇಟಿ ನೀಡಿದ್ದರು. ಆ ವೇಳೆ ಅವರು ದೋಸೆ ಹಾಗೂ ಜಾಮೂನನ್ನು ಆರ್ಡರ್ ಮಾಡಿದ್ದರು. ಆದರೆ, ಸತ್ತ ಜಿರಳೆಯೊಂದು ಜಾಮೂನಿನ ಬಟ್ಟಲಿನಲ್ಲಿ ತೇಲುತ್ತಿರುವುದನ್ನು ಕಂಡು ಕೋಪಗೊಂಡ ರಾಜಣ್ಣ ಸರ್ವ್ ಮಾಡಿದ ಮಾಣಿಯನ್ನು ಪ್ರಶ್ನೆ ಮಾಡಿದ್ದಾರೆ.