ಗುಲಾಬ್ ಚಂಡಮಾರುತಕ್ಕೆ ನಲುಗಿದ ಮಹಾರಾಷ್ಟ್ರ; 13 ಜನ ಸಾವು, 560 ಜನರ ರಕ್ಷಣೆ
ಮುಂಬೈ: ಗುಲಾಬ್ ಚಂಡಮಾರುತದಿಂದ ಅಕ್ಷರಶಃ ಮಹಾರಾಷ್ಟ್ರ ನಲುಗಿಹೋಗಿದೆ. ಮರಾಠವಾಡ ಸೇರಿದಂತೆ ಹಲವೆಡೆ ಭಾರಿ ಮಳೆ, ಪ್ರವಾಹ ಉಂಟಾಗಿದ್ದು, ಈ ಮಳೆಯಿಂದಾಗಿ ಈವರೆಗೆ ಕನಿಷ್ಠ 13 ಜನರು ಸಾವಿಗೀಡಾಗಿದ್ದಾರೆ. 560ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಮಹಾರಾಷ್ಟ್ರದ ಹಲವೆಡೆ ಭಾರೀ ಮಳೆಯಾಗಿದ್ದು, ಕೆಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಂತಹ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಮಂಗಳವಾರ ಯಾವತ್ಮಲ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಬಸ್ ವೊಂದು ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಸೇತುವೆಯನ್ನು ದಾಟುವಾಗ ಕೊಚ್ಚಿಹೋಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಆದರೆ ಬಸ್ ಚಾಲಕ, ಕಂಡಕ್ಟರ್ ಹಾಗೂ ಪ್ರಯಾಣಿಕರೊಬ್ಬರು ಕೊಚ್ಚಿಹೋಗಿದ್ದಾರೆ. ಈ ಘಟನೆ ಬಸ್ ನಾಗಪುರದಿಂದ ನಾಂದೇಡ್‌ಗೆ ಹೋಗುತ್ತಿದ್ದಾಗ ಉಮಾರ್ಖೇಡ್ ತೆಹಸಿಲ್ ನ ದಹಗಾಂವ್ ಸೇತುವೆಯಲ್ಲಿ ನಡೆದಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲತೂರ್ ನಲ್ಲೂ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಬ್ಯಾರೇಜ್ ಗಳು, ಗ್ರಾಮಗಳು ಮತ್ತು ನದಿಯ ದಡದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಎನ್ ಡಿಆರ್ ಎಫ್ ತಂಡ, ಹೆಲಿಕಾಪ್ಟರ್ ಮತ್ತು ದೋಣಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ.
ಮರಾಠವಾಡಾ ಪ್ರದೇಶದ ಔರಂಗಾಬಾದ್, ಹಿಂಗೋಲಿ, ಬೀಡ್, ಲತೂರ್, ನಾಂದೇಡ್, ಒಸ್ಮಾನಾಬಾದ್ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಮರಾಠವಾಡ ಪ್ರದೇಶದಲ್ಲಿ ಇದುವರೆಗೆ 10 ಜನರು ಸಾವಿಗೀಡಾಗಿದ್ದಾರೆ. ಅಪಾರ ಪ್ರಮಾಣ ಬೆಳೆ ಹಾನಿ ಸಂಭವಿಸಿದೆ. ಮಾಂಜ್ರಾ ಮತ್ತು ಮಜಲಗಾಂವ್ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಇಲ್ಲಿಯ ಜನರ ಬದುಕು ದುಸ್ತರವಾಗಿದೆ.