ರಾಜಕೀಯರಾಜ್ಯ

ಹುಟ್ಟೂರನ್ನೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಅಭ್ಯರ್ಥಿ; HD ಕುಮಾರಸ್ವಾಮಿ ಕಳವಳ

ನಾನು ಮಾಡಿದ ಅಭಿವೃದ್ಧಿ, ಅವರು ಮಾಡಿದ ಕೆಲಸಗಳನ್ನು ತುಲನೆ ಮಾಡಿ*

ರಾಮನಗರ/ಚನ್ನಪಟ್ಟಣ: ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಹುಟ್ಟೂರು ಚೆಕ್ಕೆರೆ ಗ್ರಾಮವನ್ನೇ ಅಭಿವೃದ್ಧಿ ಮಾಡಿಲ್ಲ, ಇನ್ನು ಅವರು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿಯ ಹುಟ್ಟೂರು ಚೆಕ್ಕೆರೆ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪ್ರಚಾರ ಭಾಷಣ ಮಾಡಿದ ಅವರು; ಆ ವ್ಯಕ್ತಿ ಹುಟ್ಟಿದ ಊರನ್ನೇ ಯಾವ ರೀತಿ ಇಟ್ಟುಕೊಂಡಿದ್ದರು ಎಂಬುದನ್ನು  ನೋಡಿದ್ದೀರಿ. ನಾವು ಎಷ್ಟು ಅಭಿವೃದ್ಧಿ ಮಾಡಿದ್ದೇವೆ ನೋಡಲಿ. ಎಲ್ಲವೂ ಜನರ ಕಣ್ಣು ಮುಂದೆಯೇ ಇದೆ ಎಂದು ಅವರು ಕುಮಾರಸ್ವಾಮಿ ಅವರು ಹೇಳಿದರು.

ಹಿಂದೆ ಇದೇ ವ್ಯಕ್ತಿ ಡಿಕೆ ಸಹೋದರರನ್ನು ವಾಚಾಮಗೋಚರವಾಗಿ ಬೈದುಕೊಂಡು ಓಡಾಡಿದ್ದರು. ಈಗ ಅವರನ್ನೇ ತಬ್ಬಿಕೊಂಡಿದ್ದಾರೆ. ನನ್ನನ್ನು ರಾಮನಗರಕ್ಕೆ ಹೊರಗಿನವನು ಎನ್ನುತ್ತಿದ್ದಾರೆ. ನಾನು ಹುಟ್ಟಿದ್ದು ಹಾಸನದಲ್ಲಿ,  ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ನಾನು ಕೊನೆಗೆ ಭೂಮಿಗೆ ಹೋಗೊದು ಈ ಮಣ್ಣಿನಲ್ಲೇ ಎಂದು ಕೇಂದ್ರ ಸಚಿವರು ಭಾವುಕರಾದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ ಕೇಳುತ್ತಿರುವ ಆ ವ್ಯಕ್ತಿ ಈ ತಾಲೂಕಿಗೆ 20 ವರ್ಷ ಶಾಸಕರಾಗಿ ಏನು ಮಾಡಿದ್ದಾರೆ? ದಾಖಲೆಗಳಿವೆ, ಪರಿಶೀಲನೆ ಮಾಡಿ. ನಾನು ಐದು ವರ್ಷದಲ್ಲಿ ಏನು ಮಾಡಿದ್ದೇನೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ನೀವು ಯಾರಿಗೂ ಹೆದರದೇ ಚುನಾವಣೆ ಮಾಡಿ. ಈಗ ಕಾಂಗ್ರೆಸ್ ನಲ್ಲಿರುವ ಅಭ್ಯರ್ಥಿ ಚುನಾವಣೆ ಬಳಿಕ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ? ರಾಮನಗರಲ್ಲಿ ಕೂಪನ್ ಹಂಚಿಕೊಂಡು ಚುನಾವಣೆ ಮಾಡಿದರು. ಚನ್ನಪಟ್ಟಣದಲ್ಲೂ ಆ ಕೆಲಸ ಆಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಮತ ನೀಡಿ ಎಂದು ಕೇಂದ್ರ ಸಚಿವರು ಮನವಿ ಮಾಡಿದರು.

ಚಕ್ಕರೆ ಗ್ರಾಮದ ಯುವಕರು ತಂಡ ಕಟ್ಟಿಕೊಂಡು ನಿಖಿಲ್ ಗೆಲ್ಲಿಸಲು ಶ್ರಮಪಡುತ್ತಿದ್ದಾರೆ. ಈ ಚುನಾವಣೆ ಸಂದರ್ಭದಲ್ಲಿಯೇ ನಾಟಕೀಯ ಬೆಳವಣಿಗೆ ಆಗಿದೆ. ನಿಮ್ಮ ಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಪಕ್ಷಾಂತರ ಮಾಡಿದ್ದಾರೆ. ಅವರಿಗಿಂತ ಹೆಚ್ಚು ಈ ಗ್ರಾಮದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಜನತೆ ಒತ್ತಡಕ್ಕೆ ಮಣಿದು ಅಭ್ಯರ್ಥಿಯಾದೆ. ಮಂಡ್ಯ ಜಿಲ್ಲೆಯ ಜನತೆ ಆಶೀರ್ವಾದ ಮಾಡಿ ಗೆಲ್ಲಿಸಿದರು. ಹಾಗಾಗಿ ಚನ್ನಪಟ್ಟಣಕ್ಕೆ ರಾಜಿನಾಮೆ ಕೊಡುವ ಅನಿವಾರ್ಯ ಬಂತು. ನಿಮ್ಮ ಗ್ರಾಮದ ನಾಯಕರನ್ನು ಅಭ್ಯರ್ಥಿ ಆಗಿ ಎಂದು ಕೇಳಿದೆವು. ನಮ್ಮ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಅಂದಿದ್ದೆ. ಆದರೆ ಸುಳ್ಳು ಹೇಳಿಕೊಂಡು ಯಾವ ರೀತಿ ನಡೆದುಕೊಂಡರು ಎಂದು ನೋಡಿದ್ದೀರಿ. ಅವರಿಗೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಆದಾದ ಬಳಿಕವೂ ಅವರು ಬಿಜೆಪಿಯಲ್ಲಿ ನಿಲ್ಲಬೇಕು ಎಂದು ಹಠ ಮಾಡಿದರು. ಅದಕ್ಕೂ ನಾನು ಒಪ್ಪಿಗೆ ಕೊಟ್ಟೆ. ಆದರೆ, ಹೇಳದೆ ಕೇಳದೆ ಬಿಜೆಪಿ ನಾಯಕರಿಗೂ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ. ಈಗ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

*ಕೇಂದ್ರ ಸಚಿವರಿಗೆ ಬಿಜೆಪಿ ನಾಯಕರ ಸಾಥ್:*

ಸಚಿವ ಕುಮಾರಸ್ವಾಮಿ ಪ್ರಚಾರಕ್ಕೆ ಬಿಜೆಪಿ ರಾಜ್ಯ ನಾಯಕರು ಸಾಥ್ ನೀಡಿದರು. ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button